ಬೈಂದೂರು : ಶ್ರೀರಾಮ ಸೌಹಾರ್ಧ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಬೈಂದೂರಿನ ಗೋಳಿಹೊಳೆ ಶಾಖೆಯ ವತಿಯಿಂದ ಸೌಹಾರ್ದ ಸಹಕಾರ ದಿನಾಚರಣೆಯ 2026, ಗ್ರಾಹಕರ ಸಭೆ ಮತ್ತು ಸಹಕಾರಿ ಸದಸ್ಯರಿಂದ ಹಾಗೂ ಸದಸ್ಯರ ಮಕ್ಕಳಿಂದ ಸಾಂಸ್ಕೃತಿಕ ಕಲವರ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭ ಗುರುವಾರ ಮಹಿಷಮರ್ಧಿನಿ ಸಭಾಭವನ ಗೋಳಿಹೊಳೆಯಲ್ಲಿ ನಡೆಯಿತು.
ಸೌಹಾರ್ದ ಸಹಕಾರ ದಿನಾಚರಣೆಯ 2026 ಕಾರ್ಯಕ್ರಮವನ್ನು ಡಾ.ಶಿವರಾಮ ಕಾರಂತ್ ಟ್ರಸ್ಟ್ ಅಧ್ಯಕ್ಷ ಡಾ.ಗಣನಾಥ ಎಕ್ಕಾರ್ ಉದ್ಘಾಟಿಸಿ ಮಾತನಾಡಿ, ಸಹಕಾರಿ ಸಂಘಗಳು ಗ್ರಾಮ ಕೇಂದ್ರೀಕೃತವಾಗಿದ್ದು, ಗ್ರಾಮದ ಜನರು ಇದನ್ನು ಸಮರ್ಪಕವಾಗಿ ಸದುಪಯೋಗಿಸಿಕೊಂಡಾಗ ಗ್ರಾಮದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ. ಇಂತಹ ಸಹಕಾರಿ ರಂಗವನ್ನು ಬಲಪಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಸಹಕಾರಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಹಾಗೂ ಆಡಳಿತ ಮಂಡಳಿ ಜ್ಞಾನ, ಕೌಶಲ್ಯ ಹಾಗೂ ಮಾನವೀಯತೆ ದೃಷ್ಟಿಕೋನ ಅಳವಡಿಸಿಕೊಂಡಾಗ ಯಶಸ್ಸು ಕಾಣಲು ಸಾಧ್ಯ ಎಂದು ಹೇಳಿದರು.

ಸಂಘ ಅಧ್ಯಕ್ಷ ಎಸ್.ರಾಜು ಪೂಜಾರಿ ಅಧ್ಯಕ್ಷತೆ ವಹಿಸಿ, ಮಾತನಾಡಿ, ಸಂಘದ ಸದಸ್ಯರು ಆರ್ಥಿಕ ಸಬಲೀಕರಣದ ಮೂಲಕ ಸಮಾಜದ ಶಕ್ತಿಯಾಗಿ ಬೆಳೆಯಬೇಕೆಂಬ ನೆಲೆಯಲ್ಲಿ ಹಾಗೂ ಗತವರ್ಷದ ಚಿಂತನ ಮಂಥನಗಳ ವಿನಿಮಯ ಮಾಡಿಕೊಳ್ಳುವ ಉದ್ದೇಶದಿಂದ ಪ್ರತಿ ವರ್ಷಾರಂಭದ ದಿನವನ್ನು ಸೌಹಾರ್ದ ಉತ್ಸವದ ರೀತಿಯಲ್ಲಿ ಆಯೋಜಿಸಲಾಗುತ್ತಿದೆ ಎಂದರು.
ಶ್ರೀರಾಮ ಸೌಹಾರ್ಧ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಬೈಂದೂರಿನ ಗೋಳಿಹೊಳೆ ಶಾಖೆಯ ವತಿಯಿಂದ ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ, ಯುವ ಉದ್ಯಮಿ ಮಹಾಲಿಂಗ ನಾಯ್ಕ ಜೋಗಿಜೆಡ್ಡು ಇವರಿಗೆ ಮಾಣಿಕ್ಯ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು ಹಾಗೂ ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸಲಾಯಿತು. ಸಂಘದ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರಗಳನ್ನು ವಿತರಿಸಲಾಯಿತು.

ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟ ಅಧ್ಯಕ್ಷ ಅಂಪಾರು ಜಗನ್ನಾಥ ಶೆಟ್ಟಿ, ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟ ನಿರ್ದೇಶಕ ಭೀಮೇಶ್ ಕುಮಾರ್ ಎಸ್. ಜಿ, ಗೋಳಿಹೊಳೆ ಗ್ರಾ.ಪಂ ಅಧ್ಯಕ್ಷ ವಸಂತ್ ಹೆಗ್ಡೆ, ಕೊಲ್ಲೂರು ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ, ನಿವೃತ್ತ ಮುಖ್ಯಶಿಕ್ಷಕ ರತ್ನಾಕರ ಶೆಟ್ಟಿ, ತಾಪಂ ಮಾಜಿ ಸದಸ್ಯ ಚುಚ್ಚಿ ನಾರಾಯಣ ಶೆಟ್ಟಿ, ಗೌತಮ್ ಶೆಟ್ಟಿ, ನಿರ್ದೇಶಕರಾದ ಸೀತಾರಾಮ ಮಡಿವಾಳ, ಅಣ್ಣಪ್ಪ ಪೂಜಾರಿ, ರಾಮಕೃಷ್ಣ ಖಾರ್ವಿ, ಸಿಇಒ ಕಿಟ್ಟಣ್ಣ ರೈ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಸಂಘ ಅಧ್ಯಕ್ಷ ಎಸ್.ರಾಜು ಪೂಜಾರಿ ಸ್ವಾಗತಿಸಿ, ಪ್ರಸ್ತಾವಿಕೆ ಮಾತನಾಡಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ನಿರೂಪಿಸಿದರು. ಸಂಘದ ಉಪಾಧ್ಯಕ್ಷ ಎಂ.ವಿನಾಯಕ ರಾವ್ ವಂದಿಸಿದರು.
ಇದನ್ನೂ ಓದಿ: ಬಳ್ಳಾರಿ ಗಲಾಟೆಯೂ ಕಾಂಗ್ರೆಸ್ ಗೂಂಡಾಗಳು ನಡೆಸಿರೋ ದುಷ್ಕೃತ್ಯ | ಬಿ ವೈ ವಿಜಯೇಂದ್ರ ಕಿಡಿ



















