ಚಿಕ್ಕಮಗಳೂರು: ಇನ್‌ಸ್ಟಾಗ್ರಾಂನಲ್ಲಿ ಯುವತಿಗೆ ನಿರಂತರವಾಗಿ ಮೆಸೇಜ್ ಮಾಡಿ ಕಾಟ ಕೊಡುತ್ತಿದ್ದ ಎಂದು ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ನಡೆದಿದೆ.
ತರೀಕೆರೆ ತಾಲೂಕಿನ ಉಡೇವಾ ಗ್ರಾಮದ ನಿವಾಸಿಮಂಜುನಾಥ್ (21) ಕೊಲೆಯಾದ ಯುವಕ. ಪರಿಚಯವಿದ್ದ ಯುವತಿಗೆ ಪದೇಪದೇ ಇನ್‌ಸ್ಟಾಗ್ರಾಂನಲ್ಲಿ ಮೆಸೇಜ್ ಮಾಡಿ ಕಾಟ ನೀಡುತ್ತಿದ್ದ. ಯುವತಿಗೆ ಈಗಾಗಲೇ ವೇಣು ಎಂಬ ಯುವಕನೊಂದಿಗೆ ಮದುವೆ ನಿಶ್ಚಿತಾರ್ಥವಾಗಿದ್ದು, ‘ಎಂಗೇಜ್ಮೆಂಟ್ ಆಗಿದೆ, ಮೆಸೇಜ್ ಮಾಡಬೇಡ’ ಎಂದು ಯುವತಿ ಮಂಜುನಾಥ್‌ಗೆ ತಿಳಿಸಿದ್ದಳು. ಆದರೂ ಮಂಜುನಾಥ್ ಮೆಸೇಜ್ ಮಾಡುತ್ತಲೇ ಇದ್ದ. ಇದನ್ನು ಯುವತಿ ತನ್ನ ಮದುವೆಯಾಗಲಿರುವ ಯುವಕ ವೇಣುಗೆ ತಿಳಿಸಿದ್ದಾಳೆ.
ಈ ಹಿನ್ನೆಲೆ ಮಾತನಾಡಬೇಕು ಎಂದು ಮಂಜುನಾಥ್‌ನನ್ನು ಕರೆಸಿಕೊಂಡ ವೇಣು ಆತನ ಮೇಲೆ ಸ್ನೇಹಿತರಾದ ಕಿರಣ್, ಅಪ್ಪು ಮತ್ತು ಮಂಜು ಜೊತೆ ಜಗಳವಾಡಿದ್ದಾನೆ. ಗಲಾಟೆ ವೇಳೆ ಮಂಜುನಾಥ್‌ಗೆ ಚಾಕುವಿನಿಂದ ಇರಿದು ನಾಲ್ವರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಗಂಭೀರ ಗಾಯಗೊಂಡ ಮಂಜುನಾಥ್‌ನ್ನು ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.
ಈ ಘಟನೆ ತರೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ತಂದೆ-ತಾಯಿ ಬೇರೆಯಾಗಿದ್ದಕ್ಕೆ ಡೆತ್ ನೋಟ್ ಬರೆದಿಟ್ಟು ಬಾಲಕಿ ಆತ್ಮಹತ್ಯೆ!



















