ಬೆಂಗಳೂರು: ಕೆಲ ದಿನಗಳ ಹಿಂದಷ್ಟೇ ರೆಪೊ ದರವನ್ನು ಇಳಿಸುವ ಮೂಲಕ ಸಾಲಗಾರರಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಗುಡ್ ನ್ಯೂಸ್ ನೀಡಿದೆ. ಇದರ ಬೆನ್ನಲ್ಲೇ, ಎಲ್ಐಸಿ ಹೌಸಿಂಗ್ ಫೈನಾನ್ಸ್ ಸಂಸ್ಥೆಯು ಗೃಹ ಸಾಲದ ಮೇಲಿನ ಬಡ್ಡಿದರವನ್ನು ಇಳಿಕೆ ಮಾಡಿದೆ. ಇದರಿಂದಾಗಿ ಗೃಹ ಸಾಲ ಮಾಡಿದವರಿಗೆ ಹಾಗೂ ಮಾಡುವವರಿಗೆ ಭಾರಿ ಅನುಕೂಲವಾಗಲಿದೆ.
ಹೌದು, ಎಲ್ಐಸಿ ಹೌಸಿಂಗ್ ಫೈನಾನ್ಸ್ ಸಂಸ್ಥೆಯು ಈಗ ಆರಂಭಿಕ ಬಡ್ಡಿದರವನ್ನು ಶೇ.7.25ಕ್ಕೆ ಇಳಿಕೆ ಮಾಡಿದೆ. ಆ ಮೂಲಕ ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ (ಎಸ್ ಬಿಐ) ಸೆಡ್ಡು ಹೊಡೆದಿದೆ. ಎಸ್ ಬಿಐನ ಗೃಹ ಸಾಲದ ಆರಂಭಿಕ ದರ ಶೇ. 7.25ರಷ್ಟಿದ್ದರೆ, ಎಲ್ ಐಸಿ ಶೇ. 7.15ರ ದರದಲ್ಲಿ ಸಾಲ ನೀಡುತ್ತಿದೆ.
ಎಲ್ಐಸಿಯ ಪರಿಷ್ಕೃತ ದರಗಳು ಗ್ರಾಹಕರ ಸಿಬಿಲ್ ಸ್ಕೋರ್ ಮತ್ತು ಸಾಲದ ಮೊತ್ತವನ್ನು ಅವಲಂಬಿಸಿವೆ. 825 ಅಥವಾ ಅದಕ್ಕಿಂತ ಹೆಚ್ಚಿನ ಸಿಬಿಲ್ ಸ್ಕೋರ್ ಹೊಂದಿರುವವರಿಗೆ 5 ಕೋಟಿ ರೂ.ವರೆಗಿನ ಸಾಲಕ್ಕೆ ಶೇ. 7.15ರಷ್ಟು ಬಡ್ಡಿ ವಿಧಿಸಲಾಗುತ್ತದೆ. ಇದೇ ವರ್ಗದಲ್ಲಿ 5 ಕೋಟಿ ರೂ.ಗಿಂತ ಹೆಚ್ಚು ಮತ್ತು 15 ಕೋಟಿ ರೂ.ವರೆಗಿನ ಸಾಲಕ್ಕೆ ಶೇ. 7.45ರಷ್ಟು ಬಡ್ಡಿ ವಿಧಿಸಲಾಗುತ್ತದೆ.
ಹೊಸ ಬಡ್ಡಿದರಗಳು ಡಿಸೆಂಬರ್ 15ರಿಂದಲೇ ಜಾರಿಗೆ ಬಂದಿವೆ. ಎಲ್ಐಸಿ ಹೌಸಿಂಗ್ ಫೈನಾನ್ಸ್ ಉತ್ತಮ ಸಿಬಿಲ್ ಸ್ಕೋರ್ ಹೊಂದಿರುವವರಿಗೆ ಎಸ್ಬಿಐಗಿಂತಲೂ ಅಗ್ಗದ ದರದಲ್ಲಿ ಅಂದರೆ, ಶೇ. 7.15ರ ಬಡ್ಡಿಗೆ ಸಾಲ ನೀಡುತ್ತಿದೆ. ಇದು ನೇರ ಮತ್ತು ಕಡಿಮೆ ವೆಚ್ಚದ ಸಾಲವನ್ನು ಹುಡುಕುತ್ತಿರುವವರಿಗೆ ಉತ್ತಮ ಅವಕಾಶವಾಗಿದೆ.
ಇದನ್ನೂ ಓದಿ: ವಿಮಾನ ನಿಲ್ದಾಣಗಳ ಪ್ರಾಧಿಕಾರದಲ್ಲಿ 3 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ : 40 ಸಾವಿರ ರೂ. ಸಂಬಳ



















