ಪುಣೆ: ಮಹಾರಾಷ್ಟ್ರದ ರಾಜಕೀಯದಲ್ಲಿ ನಡೆದ ವಿಚಿತ್ರ ಹಾಗೂ ನಾಟಕೀಯ ವಿದ್ಯಮಾನ ಎಂಬಂತೆ, ತನ್ನದೇ ಮೊಮ್ಮಗನ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಪುಣೆಯ ಕುಖ್ಯಾತ ಗ್ಯಾಂಗ್‌ಸ್ಟರ್ ಬಂಧು ಅಂದೇಕರ್, ಬಿಗಿ ಪೊಲೀಸ್ ಭದ್ರತೆಯಲ್ಲಿ ಬಂದು ಪುಣೆ ಮಹಾನಗರ ಪಾಲಿಕೆ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾನೆ.
ಯರವಾಡ ಕೇಂದ್ರ ಕಾರಾಗೃಹದಲ್ಲಿದ್ದ ಬಂಧು ಅಂದೇಕರ್‌ನನ್ನು ಶನಿವಾರ ಭವಾನಿ ಪೇಠ್‌ನಲ್ಲಿರುವ ನಾಮಪತ್ರ ಸಲ್ಲಿಕೆ ಕೇಂದ್ರಕ್ಕೆ ಕರೆತರಲಾಯಿತು. ಈ ಸಂದರ್ಭದಲ್ಲಿ ಪೊಲೀಸರು ಆತನ ಕೈಗಳಿಗೆ ಬೇಡಿ ಹಾಕಿ, ಮುಖಕ್ಕೆ ಕಪ್ಪು ಬಟ್ಟೆಯನ್ನು ಕಟ್ಟಿದ್ದರು. ಪೊಲೀಸ್ ವ್ಯಾನ್‌ನಿಂದ ಕೆಳಗಿಳಿಯುತ್ತಿದ್ದಂತೆಯೇ ಅಂದೇಕರ್ ತನ್ನ ಪರವಾಗಿ ತಾನೇ ಘೋಷಣೆಗಳನ್ನು ಕೂಗುತ್ತಾ ಕಚೇರಿಯೊಳಗೆ ಪ್ರವೇಶಿಸಿದ್ದು ಸಾರ್ವಜನಿಕರ ಗಮನ ಸೆಳೆಯಿತು.
ನ್ಯಾಯಾಲಯದ ಅನುಮತಿ
ಬಂಧು ಅಂದೇಕರ್ ಸದ್ಯ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ ಅಡಿಯಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ. ಚುನಾವಣೆಯಲ್ಲಿ ಸ್ಪರ್ಧಿಸಲು ಆತ ಸಲ್ಲಿಸಿದ್ದ ಅರ್ಜಿಯನ್ನು ಪುಣೆಯ ವಿಶೇಷ ನ್ಯಾಯಾಲಯವು ಪುರಸ್ಕರಿಸಿ, ಕೆಲವು ಷರತ್ತುಗಳೊಂದಿಗೆ ನಾಮಪತ್ರ ಸಲ್ಲಿಸಲು ಅನುಮತಿ ನೀಡಿತ್ತು.
ಅಂದೇಕರ್ ಜೊತೆಗೆ ಅದೇ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿರುವ ಆತನ ಸಂಬಂಧಿಕರಾದ ಲಕ್ಷ್ಮಿ ಅಂದೇಕರ್ (ಅತ್ತಿಗೆ) ಮತ್ತು ಸೋನಾಲಿ ಅಂದೇಕರ್ (ಸೊಸೆ) ಕೂಡ ನ್ಯಾಯಾಲಯದ ಅನುಮತಿಯೊಂದಿಗೆ ನಾಮಪತ್ರ ಸಲ್ಲಿಸಿದ್ದಾರೆ.
ಏನಿದು ಪ್ರಕರಣ?
ಸೆಪ್ಟೆಂಬರ್ 5 ರಂದು ನಾನಾ ಪೇಠ್‌ನಲ್ಲಿ ಆಯುಷ್ ಕೋಮ್ಕರ್ ಎಂಬ ಯುವಕನ ಮೇಲೆ ಗುಂಡಿನ ದಾಳಿ ನಡೆದಿತ್ತು. ಈ ಆಯುಷ್ ಬೇರೆ ಯಾರೂ ಅಲ್ಲ, ಬಂಧು ಅಂದೇಕರ್‌ನ ಸ್ವಂತ ಮೊಮ್ಮಗ. ಈ ಕೊಲೆಗೆ ಹಳೆಯ ಕೌಟುಂಬಿಕ ದ್ವೇಷವೇ ಕಾರಣ ಎಂದು ಹೇಳಲಾಗುತ್ತಿದೆ. ಬಂಧು ಅಂದೇಕರ್ ಮಗ ಮತ್ತು ಮಾಜಿ ಎನ್‌ಸಿಪಿ ಕಾರ್ಪೊರೇಟರ್ ವನರಾಜ್ ಅಂದೇಕರ್ ಕೊಲೆ ಪ್ರಕರಣದಲ್ಲಿ ಆಯುಷ್ ತಂದೆ ಗಣೇಶ್ ಕೋಮ್ಕರ್ ಆರೋಪಿಯಾಗಿದ್ದ. ಇದಕ್ಕೆ ಪ್ರತಿಕಾರವಾಗಿ ಮೊಮ್ಮಗನನ್ನೇ ಕೊಲ್ಲಲಾಗಿದೆ ಎಂಬ ಆರೋಪ ಇವರ ಮೇಲಿದೆ.
ಚುನಾವಣೆ ಯಾವಾಗ?
ಪುಣೆ ಸೇರಿದಂತೆ ಮಹಾರಾಷ್ಟ್ರದ ಒಟ್ಟು 29 ಮಹಾನಗರ ಪಾಲಿಕೆಗಳಿಗೆ ಜನವರಿ 15 ರಂದು ಚುನಾವಣೆ ನಡೆಯಲಿದೆ. ಜೈಲಿನಲ್ಲಿದ್ದರೂ ಪ್ರಭಾವ ಹೊಂದಿರುವ ಈ ಗ್ಯಾಂಗ್‌ಸ್ಟರ್ ಕುಟುಂಬ ಚುನಾವಣಾ ಕಣಕ್ಕಿಳಿದಿರುವುದು ಪುಣೆ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
ಇದನ್ನೂ ಓದಿ: ಡ್ಯೂಟಿ ಮುಗಿಸಿ ಮರಳಿದ್ದ ASI ಹೃದಯಾಘಾತದಿಂದ ನಿಧನ



















