ಬೆಂಗಳೂರು: ದೇಶದಲ್ಲಿ ದಿನೇದಿನೆ ಚಿನ್ನದ ಬೆಲೆ ಗಗನಕ್ಕೇರುತ್ತಿದ್ದರೂ ಚಿನ್ನ ಖರೀದಿ ಮಾಡುವವರ ಪ್ರಮಾಣಪವಂತೂ ಕಡಿಮೆ ಆಗಿಲ್ಲ. ಹಾಗೆಯೇ, ತುರ್ತು ಸಂದರ್ಭದಲ್ಲಿ ಜನರು ತಮ್ಮ ಬಳಿ ಇರುವ ಚಿನ್ನವನ್ನು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಗಿರವಿ ಇಟ್ಟು ಸಾಲ ಪಡೆಯುತ್ತಾರೆ. ಭಾರತೀಯ ರಿಸರ್ವ್ ಬ್ಯಾಂಕ್ ಈಗ ಚಿನ್ನದ ಮೇಲೆ ಸಾಲ ನೀಡಲು ಬ್ಯಾಂಕ್ ಗಳಿಗೆ ಹಾಗೂ ಹಣಕಾಸು ಸಂಸ್ಥೆಗಳಿಗೆ ಹಲವು ಮಾರ್ಗಸೂಚಿಗಳನ್ನು ನೀಡಿದೆ.
ನೀವು 10 ಗ್ರಾಂ ಚಿನ್ನವನ್ನು ಅಡಮಾನ ಇಟ್ಟರೆ, ಇಷ್ಟೇ ಪ್ರತಿಶತ ಹಣವನ್ನು ಸಾಲವಾಗಿ ನೀಡಬೇಕು ಎಂದು ಆರ್ ಬಿಐ ಮಾರ್ಗಸೂಚಿ ಪ್ರಕಟಿಸಿದೆ. ಇದನ್ನೇ ಲೋನ್-ಟು-ವ್ಯಾಲ್ಯೂ (ಎಲ್ ಟಿವಿ) ರೇಷಿಯೋ ಎಂದು ಕರೆಯುತ್ತಾರೆ. ಅಂದರೆ, ನೀವು ಚಿನ್ನವನ್ನು ಅಡಮಾನ ಇಟ್ಟಾಗ, ಅದರ ಮೌಲ್ಯವನ್ನು ಆಧರಿಸಿ, ನೀಡುವ ಸಾಲದ ಪ್ರಮಾಣವಾಗಿದೆ.
ನೀವು, ಚಿನ್ನವನ್ನು ಅಡಮಾನ ಇಟ್ಟು 2.5 ಲಕ್ಷ ರೂಪಾಯಿವರೆಗೆ ಸಾಲ ಪಡೆದರೆ ಗರಿಷ್ಠ 85 ಪ್ರತಿಶತ ಎಲ್ ಟಿವಿ ದೊರೆಯುತ್ತದೆ. 2.5 ಲಕ್ಷದಿಂದ 5 ಲಕ್ಷ ರೂರೆಗೆ ಸಾಲ ಪಡೆದರೆ ಗರಿಷ್ಠ 80 ಪ್ರತಿಶತ ಎಲ್ ಟಿವಿ ಇರುತ್ತದೆ. 5 ಲಕ್ಷ ರೂಪಾಯಿ ದಾಟಿದರೆ ಎಲ್ ಟಿವಿ ಮಿತಿಯು 75 ಪ್ರತಿಶತ ಆಗಿರುತ್ತದೆ. ಇದರ ಪರಿಣಾಮವೇನೆಂದರೆ, ಕಡಿಮೆ ಮೊತ್ತದ ಸಾಲ ಪಡೆಯುವವರಿಗೆ ಹೆಚ್ಚಿನ ಮೌಲ್ಯ ಸಿಗುತ್ತದೆ ಮತ್ತು ದೊಡ್ಡ ಮೊತ್ತದ ಸಾಲಗಳನ್ನು ಎಚ್ಚರಿಕೆಯಿಂದ ನಿಯಂತ್ರಿಸಲಾಗುತ್ತದೆ.
ಇದರ ಬೆನ್ನಲ್ಲೇ, ಚಿನ್ನದ ಆಭರಣಗಳ ಹರಾಜು ನಿಯಮಗಳು ಸಂಪೂರ್ಣವಾಗಿ ಪಾರದರ್ಶಕವಾಗಿರಬೇಕು ಎಂದು ಆರ್ ಬಿಐ ಸೂಚಿಸಿದೆ. ನೀವು ಸಾಲ ಮರುಪಾವತಿಸಲು ಸಾಧ್ಯವಾಗದಿದ್ದರೆ, ಹರಾಜಿಗೂ ಮೊದಲು ನಿಮಗೆ ನೋಟಿಸ್ ನೀಡಬೇಕು. ಹರಾಜು ಪ್ರಕ್ರಿಯೆಯು ಪಾರದರ್ಶಕವಾಗಿ ನಡೆಯಬೇಕು. ಹರಾಜಿನ ನಂತರ ಸಾಲದ ಮೊತ್ತಕ್ಕಿಂತ ಹೆಚ್ಚಿನ ಹಣ ಉಳಿದರೆ, ಅದನ್ನು ತಕ್ಷಣವೇ ಸಾಲಗಾರನಿಗೆ ಹಿಂತಿರುಗಿಸಬೇಕು ಎಂದು ತಿಳಿಸಲಾಗಿದೆ.
ಇದನ್ನೂ ಓದಿ : ಭಾರತ ಟೆಸ್ಟ್ ತಂಡದ ಕೋಚ್ ಹುದ್ದೆಯಿಂದ ಗೌತಮ್ ಗಂಭೀರ್‌ಗೆ ಕೊಕ್? ಬಿಸಿಸಿಐ ಮೂಲಗಳು ನೀಡಿದ ಸುಳಿವು ಇಲ್ಲಿದೆ!



















