ಬೆಂಗಳೂರು : ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ದೆಹಲಿ ಮತ್ತು ಆಂಧ್ರಪ್ರದೇಶ ನಡುವಿನ ವಿಜಯ್ ಹಜಾರೆ ಟೂರ್ನಿಯ ಪಂದ್ಯಕ್ಕೆ ಅನುಮತಿ ನೀಡಲು ಪೊಲೀಸರು ನಿರಾಕರಿಸಿದ್ದಾರೆ.
ಪಂದ್ಯ ನಡೆಸುವ ಸಂಬಂಧ ಸೋಮವಾರ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದರು. ಅಷ್ಟೆ ಅಲ್ಲದೇ, ಅಗ್ನಿಶಾಮಕ ದಳದ ಅಧಿಕಾರಿಗಳು ಕೂಡ ಕ್ರೀಡಾಂಗಣಕ್ಕೆ ಆಗಮಿಸಿ ಸುರಕ್ಷತೆ ಬಗ್ಗೆ ಪರಿಶೀಲನೆ ನಡೆಸಿದ್ದರು. ಪರಿಶೀಲನೆಯ ಬಳಿಕ ಈ ತಂಡ ಸರ್ಕಾರಕ್ಕೆ ವರದಿ ನೀಡಿತ್ತು. ಅಂತಿಮವಾಗಿ ಬೆಂಗಳೂರು ಪೊಲೀಸರು ಪಂದ್ಯಕ್ಕೆ ಅನುಮತಿ ನಿರಾಕರಣೆ ಮಾಡಿದ್ದಾರೆ.
ಬುಧವಾರ ದೆಹಲಿ ಮತ್ತು ಆಂಧ್ರಪ್ರದೇಶದ ಮಧ್ಯೆ ಮೊದಲ ಪಂದ್ಯ ನಿಗದಿಯಾಗಿತ್ತು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೂಡ ದೆಹಲಿ ಪರ ಕಣಕ್ಕೆ ಇಳಿಯಬೇಕಿತ್ತು. ಪ್ರೇಕ್ಷಕರಿಗೆ ಅವಕಾಶ ಇಲ್ಲದೇ ಪಂದ್ಯ ಆಯೋಜಿಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಮುಖ್ಯಸ್ಥ ವೆಂಕಟೇಶ್ ಪ್ರಸಾದ್ ಗೃಹ ಸಚಿವ ಪರಮೇಶ್ವರ್ ಅವರಲ್ಲಿ ಮನವಿ ಮಾಡಿದ್ದರು. ಇದೀಗ ಅವರಿಗೆ ಭಾರೀ ಹಿನ್ನಡೆಯಾಗಿದೆ.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಷ್ಟ್ರೀಯ ಪಂದ್ಯ ನಡೆಸಲು ಹರಸಾಸಹ ಪಟ್ಟಿದ್ದ ವೆಂಕಟೇಶ್ ಪ್ರಸಾದ್ ಅವರು, ಕೊನೆಗೂ ಪಂದ್ಯದ ಆತಿಥ್ಯ ಪಡೆಯುವಲ್ಲಿ ವಿಫಲರಾಗಿದ್ದಾರೆ. ಮೂಲಭೂತ ಹಾಗೂ ಭದ್ರತಾ ಸುರಕ್ಷತಾ ದೃಷ್ಟಿಯಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಸಲು ನಿರಾಕರಿಸಲಾಗಿದೆ.
ಕಳೆದ ಜೂನ್‌ನಲ್ಲಿ ಆರ್‌ಸಿಬಿ ವಿಜಯೋತ್ಸವ ವೇಳೆ ಸಂಭವಿಸಿದ್ದ ಕಾಲ್ತುಳಿತದಲ್ಲಿ 11 ಮಂದಿ ಅಭಿಮಾನಿಗಳು ಸಾವನ್ನಪ್ಪಿದ್ದ ಬಳಿಕ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಪಂದ್ಯಗಳನ್ನ ಸ್ಥಗಿತಗೊಳಿಸಲಾಗಿತ್ತು. ಇದೇ ಕಾರಣದಿಂದ ಮಹಿಳಾ ವಿಶ್ವಕಪ್ ಪಂದ್ಯ ಕೂಡ ಕೈತಪ್ಪಿತ್ತು.
ಇದನ್ನೂ ಓದಿ : ಭಾರತದ ಸಾಂವಿಧಾನಿಕ ಸಂಸ್ಥೆಗಳು ಬಿಜೆಪಿ ವಶದಲ್ಲಿವೆ : ಬರ್ಲಿನ್‌ನಲ್ಲಿ ರಾಹುಲ್ ಗಾಂಧಿ ವಾಗ್ದಾಳಿ, ಬಿಜೆಪಿ ಕಿಡಿ



















