ಬೆಂಗಳೂರು: ಕಳೆದ ಹಲವು ದಿನಗಳಿಂದ ರಾಜ್ಯದೆಲ್ಲೆಡೆ ಶೀತದಲೆ ಅಬ್ಬರಿಸುತ್ತಿದ್ದು, ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಚಳಿ ಕಂಡಿದೆ. ನಿನ್ನೆ ವಿಜಯಪುರದಲ್ಲಿ ಅತಿ ಕಡಿಮೆ ಉಷ್ಣಾಂಶ ದಾಖಲಾಗಿತ್ತು. ಇಂದು ವಿಪರೀತ ಶೀತಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ 15 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ.
ವಿಜಯಪುರದಲ್ಲಿ ನಿನ್ನೆ(ಡಿ.21) 6.9 ಡಿಗ್ರಿ ಸೆಲ್ಸಿಯಲ್ಸ್ ಉಷ್ಣಾಂಶ ದಾಖಲಾಗಿತ್ತು.ಕಳೆದ 20 ವರ್ಷಗಳ ಅಂಕಿ ಅಂಶಗಳ ಪ್ರಕಾರ ಮೂರನೇ ಬಾರಿಗೆ ದಾಖಲಾದ ಅತಿ ಕಡಿಮೆ ಉಷ್ಣಾಂಶ ಇದಾಗಿದೆ. ಅಂತೆಯೇ ಇಂದೂ ಉತ್ತರ ಕರ್ನಾಟಕದೆಲ್ಲೆಡೆ ಶೀತದಲೆಯ ಪ್ರಮಾಣ ಹೆಚ್ಚಿದ್ದು, ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ವಿಜಯಪುರ, ಕೊಪ್ಪಳ, ಧಾರವಾಡ, ಹಾವೇರಿ, ವಿಜಯನಗರ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ತುಮುಕೂರು, ಚಿಕ್ಕಬಳ್ಳಾಪುರ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಮಂಡ್ಯ, ಮೈಸೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಶೀತ ಗಾಳಿ ಬೀಸುವ ಹಿನ್ನೆಲೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.
ಈ ರೀತಿಯ ತೀವ್ರ ಚಳಿಯಿಂದ ಜನರ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದು, ಬೆಚ್ಚಗಿನ ಹೊದಿಕೆ ಹೊತ್ತುಕೊಳ್ಳಬೇಕು ಹಾಗೂ ಬಿಸಿ ಆಹಾರ ಸೇವನೆ ಮಾಡಬೇಕೆಂದು ವೈದ್ಯರು ಸೂಚಿಸಿದ್ದಾರೆ.
ಬೆಂಗಳೂರಿನಲ್ಲಿ ಮುಂದುವರೆದ ಚಳಿ
ಕಳೆದ ಕೆಲ ದಿನಗಳಿಂದ ರಾಜಧಾನಿಯ ವಾತಾವರಣದಲ್ಲಿ ಸಾಕಷ್ಟು ಏರು ಪೇರಾಗುತ್ತಿದ್ದು, ಚಳಿಯ ಪ್ರಮಾಣ ಹೆಚ್ಚುತ್ತಿದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಚ್ಚರಿಕೆಯಿಂದಿರುವಂತೆ ಸಲಹೆ ನೀಡಿರುವ ಹವಾಮಾನ ಇಲಾಖೆ, ಬೆಚ್ಚನೆಯ ಉಡುಪು ಧರಿಸುವುದರ ಜೊತೆಗೆ ಸಮತೋಲನ ಆಹಾರ ಸೇವನೆಗೆ ಒತ್ತು ನೀಡುವಂತೆ ಸಲಹೆ ನೀಡಿದೆ. ಈ ಮಧ್ಯೆ ಬೆಂಗಳೂರಿನ ತಾಪಮಾನ ಕನಿಷ್ಠ 14°C ಇದ್ದು, ಗರಿಷ್ಠ 27°C ಇರಲಿದೆ ಎಂದು ಇಲಾಖೆ ತಿಳಿಸಿದೆ.
ಇದನ್ನೂ ಓದಿ: ರಾಜ್ಯದ ಹಲವೆಡೆ ಚಳಿಯ ಅಬ್ಬರ, ತಾಪಮಾನ ಕುಸಿತ | ಹವಾಮಾನ ಇಲಾಖೆ ಸೂಚನೆ



















