ಬೆಂಗಳೂರು: ದೇಶದಲ್ಲಿ ಪ್ರತಿ ದಿನ ಲಕ್ಷಾಂತರ ಪ್ರಯಾಣಿಕರು ರೈಲುಗಳಲ್ಲಿ ಸಂಚರಿಸುತ್ತಾರೆ. ಭಾರತೀಯ ರೈಲ್ವೆಯು ಜಗತ್ತಿನಲ್ಲೇ ಅತಿ ಹೆಚ್ಚು ಜನರಿಗೆ ಉದ್ಯೋಗ ನೀಡಿದ ಸಂಸ್ಥೆ ಎಂಬ ಹೆಗ್ಗಳಿಕೆಯೂ ಹೊಂದಿದೆ. ಇಂತಹ ಹಿನ್ನೆಲೆಯ ರೈಲ್ವೆ ಇಲಾಖೆಯು ಈಗ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ. ಯಾವುದೇ ರೈಲು ಸಂಚಾರ ಆರಂಭಿಸುವ 10 ಗಂಟೆ ಮೊದಲು ಚಾರ್ಟ್ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ. ಇದರಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಇದುವರೆಗೆ ರೈಲು ಹೊರಡುವ 4 ಗಂಟೆ ಮೊದಲು ಚಾರ್ಟ್ ಬಿಡುಗಡೆ ಮಾಡಲಾಗುತ್ತಿತ್ತು. ಇದರಿಂದ ಕೊನೆಯ ಕ್ಷಣದಲ್ಲಿ ವೇಟಿಂಗ್ ಲಿಸ್ಟ್ ಇದ್ದವರಿಗೆ, ಆರ್ ಎಸಿ ಇದ್ದವರಿಗೆ ಅನನುಕೂಲವಾಗುತ್ತಿತ್ತು. ಸೀಟು ಸಿಗದವರು ಬೇರೆ ವ್ಯವಸ್ಥೆ ಮಾಡಿಕೊಳ್ಳಲು ಕಷ್ಟವಾಗುತ್ತಿತ್ತು. ಹಾಗಾಗಿ, ರೈಲ್ವೆ ಇಲಾಖೆಯು ಈಗ ಚಾರ್ಟ್ ಪ್ರಿಪೇರ್ ಮಾಡುವ ಅವಧಿಯನ್ನು 10 ಗಂಟೆಗೆ ಏರಿಕೆ ಮಾಡಿದೆ. ಇದರಿಂದ ಪ್ರಯಾಣಿಕರು ರಿಸರ್ವೇಷನ್ ಟಿಕೆಟ್ ಸಿಗುತ್ತದೆಯೋ, ಇಲ್ಲವೋ ಎಂಬುದನ್ನು ಬೇಗನೆ ತಿಳಿದುಕೊಳ್ಳಬಹುದಾಗಿದೆ.
ಹೊಸ ನಿಯಮಗಳು ತತ್ ಕ್ಷಣದಿಂದಲೇ ಜಾರಿಗೆ ಬರಲಿವೆ. ಇದರ ಕುರಿತು ಆಯಾ ವಲಯಗಳಿಗೆ ಈಗಾಗಲೇ ರೈಲ್ವೆ ಇಲಾಖೆಯು ಸೂಚನೆ ನೀಡಿದೆ ಎಂದು ತಿಳಿದುಬಂದಿದೆ. ಬೆಳಗ್ಗೆ 5ರಿಂದ ಮಧ್ಯಾಹ್ನ 2 ಗಂಟೆವರೆಗೆ ಹೊರಡುವ ರೈಲುಗಳ ಮೊದಲ ರಿಸರ್ವೇಷನ್ ಚಾರ್ಟ್ ಅನ್ನು ಹಿಂದಿನ ರಾತ್ರಿ 8 ಗಂಟೆ ಹೊತ್ತಿಗೆ ಸಿದ್ಧಪಡಿಸಲಾಗುತ್ತದೆ. ಮಧ್ಯಾಹ್ನ 2.01ರಿಂದ ರಾತ್ರಿ 11.59ರವರೆಗೆ ಮತ್ತು ಮಧ್ಯರಾತ್ರಿ 12 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ಹೊರಡುವ ರೈಲುಗಳ ಚಾರ್ಟ್ಅನ್ನು 10 ಗಂಟೆಗಳ ಮುಂಚಿತವಾಗಿ ಪ್ರಕಟಿಸಬೇಕು ಎಂದು ರೈಲ್ವೆ ಇಲಾಖೆ ತಿಳಿಸಿದೆ.
ದೂರದ ಊರುಗಳಿಗೆ ಪ್ರಯಾಣಿಸುವವರು ಮೊದಲೇ ಟಿಕೆಟ್ ರಿಸರ್ವ್ ಮಾಡಿರುತ್ತೇರೆ. ವೇಟಿಂಗ್ ಲಿಸ್ಟ್ ಇದ್ದರೂ ಕೂಡ ಕೊನೆಯ ಕ್ಷಣದಲ್ಲಿ ಸೀಟು ಸಿಗಬಹುದು ಎಂದು ಬುಕ್ ಮಾಡಿರುತ್ತಾರೆ. ಆದರೆ, ನಾಲ್ಕು ಗಂಟೆ ಮೊದಲು ಚಾರ್ಟ್ ಪ್ರಿಪೇರ್ ಆದರೆ, ಅವರು ಬೇರೆ ವ್ಯವಸ್ಥೆ ಮಾಡಿಕೊಳ್ಳಲು ಇದುವರೆಗೆ ಕಷ್ಟವಾಗುತ್ತಿತ್ತು. ಈಗ ಹೊಸ ನಿಯಮದಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಇದನ್ನೂ ಓದಿ: ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ 8 ಪ್ರೊಫೆಸರ್ ಹುದ್ದೆಗಳ ನೇಮಕಾತಿ : 45 ಸಾವಿರ ರೂ. ಸಂಬಳ



















