ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಮೈಕೊರೆಯುವ ಚಳಿ ಆರಂಭವಾಗಿದೆ. ಕಳೆದ ಎರಡು ದಿನಗಳಿಂದ ನಗರದಲ್ಲಿ ಕನಿಷ್ಠ ತಾಪಮಾನ 14-15° ಸೆಲ್ಸಿಯಸ್ ದಾಖಲಾಗಿದ್ದು, ಮುಂದಿನ ಮೂರು ದಿನಗಳು ಸಹ ರಾಜ್ಯಾದ್ಯಂತ ಇದೇ ರೀತಿಯ ಚಳಿ ಮುಂದುವರೆಯುವ ಹಾಗೂ ಶೀತದ ವಾತಾವರಣ ಉಂಟಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಅಲ್ಲದೇ ಬಾಗಲಕೋಟೆಗೆ ಆರೆಂಜ್ ಅಲರ್ಟ್, ಚಿಕ್ಕಮಗಳೂರು, ಗದಗ ಹಾಗೂ ಮೈಸೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮೈಕೊರೆಯುವ ಚಳಿ ಹಿನ್ನೆಲೆಯಲ್ಲಿ ನಗರದಲ್ಲಿ ಬೆಳಗ್ಗೆ ವಾಕಿಂಗ್‌ಗೆ ತೆರಳಲು ಜನ ಹಿಂದೇಟು ಹಾಕುತ್ತಿದ್ದಾರೆ. ಲಾಲ್‌ಬಾಗ್, ಕಬ್ಬನ್ ಪಾರ್ಕ್‌ಗಳಲ್ಲಿ ವಾಯುವಿಹಾರಕ್ಕೆ ಬರುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ.
ರಾಜ್ಯದಲ್ಲಿ ಭಾನುವಾರ ಬಿದರ್ನಲ್ಲಿ ಕನಿಷ್ಠ 7.4°C ಉಷ್ಣಾಂಶ ಕಂಡು ಬಂದಿದ್ದು, ಹಾಸನದಲ್ಲಿ 8.7°C, ಆಗುಂಬೆಯಲ್ಲಿ 9.3°C, ಧಾರವಾಡದಲ್ಲಿ 9.5°C, ವಿಜಯಪುರದಲ್ಲಿ 10°C, ಹೊನ್ನಾವರದಲ್ಲಿ ಕನಿಷ್ಠ 19.13°C, ಬೆಂಗಳೂರಿನ ಎಚ್ಎಎಲ್ ವ್ಯಾಪ್ತಿಯಲ್ಲಿ 13.4°C, ನಗರದ ಇತರೆಡೆ ಸರಾಸರಿ 14.5°C ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇದನ್ನೂ ಓದಿ : ಅಪ್ರಾಪ್ತೆಗೆ ಮಾದಕ ದ್ರವ್ಯ ಕೊಟ್ಟು ಅಶ್ಲೀಲ ವಿಡಿಯೋ ಸೆರೆ ಹಿಡಿದ ಯುವಕ | ತಾಯಿ ಆತ್ಮಹತ್ಯೆಗೆ ಯತ್ನ



















