ಲಕ್ನೋ: ಸಾಮಾನ್ಯ ಪೊಲೀಸ್ ಪೇದೆಯೊಬ್ಬ ಎಷ್ಟೇ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದರೂ ನಿವೃತ್ತಿಯ ವೇಳೆಗೆ ಒಂದು ಸ್ವಂತ ಮನೆ ಕಟ್ಟಿಕೊಳ್ಳುವುದು ಕಷ್ಟ. ಆದರೆ, ಉತ್ತರ ಪ್ರದೇಶದಲ್ಲಿ ವಜಾಗೊಂಡ ಪೇದೆಯೊಬ್ಬ ಅಕ್ರಮ ದಂಧೆಯ ಮೂಲಕ ಸಂಪಾದಿಸಿ ಕಟ್ಟಿದ ಐಷಾರಾಮಿ ಬಂಗಲೆಯನ್ನು ಕಂಡು ಸ್ವತಃ ತನಿಖಾ ಅಧಿಕಾರಿಗಳೇ ದಂಗಾಗಿ ಹೋಗಿದ್ದಾರೆ.
ಕೋಡಿನ್ (Codeine) ಮಿಶ್ರಿತ ಕೆಮ್ಮಿನ ಸಿರಪ್ ಅನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ದಂಧೆಯ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು, ಲಕ್ನೋದಲ್ಲಿರುವ ಆರೋಪಿ ಅಲೋಕ್ ಪ್ರತಾಪ್ ಸಿಂಗ್ ಅವರ ಬಂಗಲೆಗೆ ದಾಳಿ ನಡೆಸಿದಾಗ ಅಲ್ಲಿನ ವೈಭವೋಪರಿತ ದೃಶ್ಯ ಕಂಡು ಅವಾಕ್ಕಾಗಿದ್ದಾರೆ.
ಯುರೋಪಿಯನ್ ಶೈಲಿಯ ರಾಜವೈಭೋಗ!
ಲಕ್ನೋ-ಸುಲ್ತಾನ್‌ಪುರ ಹೆದ್ದಾರಿಯ ಅಹ್ಮಮಾವು ಎಂಬಲ್ಲಿ ತಲೆ ಎತ್ತಿರುವ ಈ ಬಂಗಲೆ ಯಾವುದೇ ಅರಮನೆಗೂ ಕಡಿಮೆ ಇಲ್ಲದಂತಿದೆ. ಬರೋಬ್ಬರಿ 7,000 ಚದರ ಅಡಿ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಈ ಎರಡು ಅಂತಸ್ತಿನ ಬಂಗಲೆಯನ್ನು ಸಂಪೂರ್ಣವಾಗಿ ಯುರೋಪಿಯನ್ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದೆ.
ಮನೆಯ ಮುಂಭಾಗದಲ್ಲಿ ಎತ್ತರವಾದ ಪಿಲ್ಲರ್‌ಗಳು, ವಿಶಾಲವಾದ ಬಾಲ್ಕನಿಗಳಿಗೆ ಅಳವಡಿಸಿರುವ ಕಲಾತ್ಮಕ ರೈಲಿಂಗ್‌ಗಳು ನೋಡುಗರ ಕಣ್ಮನ ಸೆಳೆಯುತ್ತವೆ.ಮನೆಯ ಒಳಗೆ ಪ್ರವೇಶಿಸುತ್ತಿದ್ದಂತೆಯೇ ಸುರುಳಿ ಆಕಾರದ ಸುಂದರ ಮೆಟ್ಟಿಲುಗಳು (Spiral Staircase), ಇಟಾಲಿಯನ್ ಮಾರ್ಬಲ್ ಫ್ಲೋರಿಂಗ್ ಮತ್ತು ಗೋಡೆಗಳ ಮೇಲೆ ತೂಗುಹಾಕಲಾದ ದುಬಾರಿ ಪೇಂಟಿಂಗ್‌ಗಳು ಸ್ವಾಗತಿಸುತ್ತವೆ.ಅರಮನೆಗಳಂತೆ ಕಾಣುವ ವಿಂಟೇಜ್ ದೀಪಗಳು (Chandeliers) ಮತ್ತು ಅತ್ಯಮೂಲ್ಯ ಪೀಠೋಪಕರಣಗಳು ಈ ಮನೆಯ ಅಂದವನ್ನು ಹೆಚ್ಚಿಸಿವೆ. ಇವೆಲ್ಲವರೂ ಅಕ್ರಮ ದುಡ್ಡಿನಿಂದಿ ಬಂದಿರುವ ಸೌಂದರ್ಯ.
ಅಧಿಕಾರಿಗಳ ಅಂದಾಜಿನ ಪ್ರಕಾರ, ಈ ಮನೆಯ ಒಟ್ಟು ಮೌಲ್ಯ ಸುಮಾರು 7 ಕೋಟಿ ರೂಪಾಯಿಗಳಷ್ಟಿರಬಹುದು. ಇದರಲ್ಲಿ ಕೇವಲ ಇಂಟೀರಿಯರ್ ಡಿಸೈನ್ ಅಥವಾ ಒಳಾಂಗಣ ವಿನ್ಯಾಸಕ್ಕಾಗಿಯೇ 1.5 ರಿಂದ 2 ಕೋಟಿ ರೂ. ಖರ್ಚು ಮಾಡಲಾಗಿದೆ! ಭೂಮಿಯ ಬೆಲೆಯನ್ನು ಹೊರತುಪಡಿಸಿ, ಕೇವಲ ಕಟ್ಟಡ ನಿರ್ಮಾಣಕ್ಕೇ ಸುಮಾರು 5 ಕೋಟಿ ರೂ. ವ್ಯಯಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ದಾಳಿಯ ವೇಳೆ ಮನೆಯಲ್ಲಿ ಪ್ರಾದಾ (Prada) ಮತ್ತು ಗುಸ್ಸಿ (Gucci)ಯಂತಹ ದುಬಾರಿ ಬ್ರ್ಯಾಂಡ್‌ನ ಹ್ಯಾಂಡ್‌ಬ್ಯಾಗ್‌ಗಳು, ಲಕ್ಷಾಂತರ ರೂ. ಬೆಲೆಬಾಳುವ ರಾಡೋ ವಾಚ್‌ಗಳು ಮತ್ತು ಹೈ-ಎಂಡ್ ಎಲೆಕ್ಟ್ರಾನಿಕ್ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಯಾರು ಈ ಅಲೋಕ್ ಪ್ರತಾಪ್ ಸಿಂಗ್?
ಈ ಐಷಾರಾಮಿ ಬಂಗಲೆಯ ಒಡೆಯ ಅಲೋಕ್ ಪ್ರತಾಪ್ ಸಿಂಗ್, ಮೂಲತಃ ಉತ್ತರ ಪ್ರದೇಶ ಪೊಲೀಸ್ ಇಲಾಖೆಯಲ್ಲಿ ಪೇದೆಯಾಗಿ ಕೆಲಸ ಮಾಡುತ್ತಿದ್ದವರು. ಆದರೆ, ಖಾಕಿ ಸಮವಸ್ತ್ರಕ್ಕಿಂತ ಅಕ್ರಮ ಸಂಪಾದನೆಯ ಮೇಲೆಯೇ ಇವರಿಗೆ ಹೆಚ್ಚು ಒಲವಿತ್ತು.
ಇವರು ಸೇವೆಯಿಂದ ವಜಾಗೊಳ್ಳುತ್ತಿರುವುದು ಇದೇ ಮೊದಲೇನಲ್ಲ. 2006ರಲ್ಲಿ ಲೂಟಿ ಮಾಡಲಾದ 4 ಕೆಜಿ ಚಿನ್ನದ ಪ್ರಕರಣದಲ್ಲಿ ಮೊದಲ ಬಾರಿಗೆ ಇವರನ್ನು ಬಂಧಿಸಿ ಸೇವೆಯಿಂದ ವಜಾಗೊಳಿಸಲಾಗಿತ್ತು. ನಂತರ ಆ ಪ್ರಕರಣದಲ್ಲಿ ಖುಲಾಸೆಗೊಂಡು ಮತ್ತೆ ಸೇವೆಗೆ ಸೇರಿದ್ದರು. ಆದರೆ, ಹಳೆಯ ಚಾಳಿ ಬಿಡದ ಇವರು, 2019ರಲ್ಲಿ ಮತ್ತೆ ಅಮಾನತುಗೊಂಡರು. ಈ ಬಾರಿ ಅವರು ಆಯ್ಕೆ ಮಾಡಿಕೊಂಡಿದ್ದು ಅಪಾಯಕಾರಿ ‘ಕಾಫ್ ಸಿರಪ್ ದಂಧೆ’.
ಅಮಲು ಪದಾರ್ಥದ ಜಾಲ:
ವೈದ್ಯರ ಚೀಟಿ ಇಲ್ಲದೆ ಮಾರಾಟ ಮಾಡಬಾರದ, ಅಮಲು ಬರಿಸುವ ಕೋಡಿನ್ ಅಂಶವಿರುವ ಕೆಮ್ಮಿನ ಸಿರಪ್‌ಗಳಿಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿದೆ. ಇದನ್ನು ಅರಿತ ಅಲೋಕ್, ತಮಗೆ ಪೊಲೀಸ್ ಮತ್ತು ರಾಜಕೀಯ ವಲಯದಲ್ಲಿದ್ದ ಹಳೆಯ ಸಂಪರ್ಕಗಳನ್ನು ಬಳಸಿಕೊಂಡು ಉತ್ತರ ಪ್ರದೇಶ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ದೊಡ್ಡ ಮಟ್ಟದ ಸಗಟು ಜಾಲವನ್ನೇ ಹುಟ್ಟುಹಾಕಿದ್ದರು. ಈ ಮೂಲಕ ಕೋಟ್ಯಂತರ ರೂಪಾಯಿ ಅಕ್ರಮ ಹಣ ಗಳಿಸಿ, ಐಷಾರಾಮಿ ಬಂಗಲೆ ನಿರ್ಮಿಸಿಕೊಂಡಿದ್ದರು.
ಜೈಲು ಸೇರಿದ ‘ಕುಬೇರ’:
ಅಕ್ರಮವಾಗಿ ಔಷಧ ದಾಸ್ತಾನು ಮತ್ತು ವಿತರಣೆ ಮಾಡುತ್ತಿದ್ದ ಈ ಜಾಲವನ್ನು ಭೇದಿಸಲು ಉತ್ತರ ಪ್ರದೇಶ ಸರ್ಕಾರ ವಿಶೇಷ ತನಿಖಾ ದಳವನ್ನು (SIT) ರಚಿಸಿತ್ತು. ಈ ಕಾರ್ಯಾಚರಣೆಯಲ್ಲಿ ಡಿಸೆಂಬರ್ 2ರಂದು ಎಸ್‌ಟಿಎಫ್ (STF) ಪೊಲೀಸರು ಅಲೋಕ್ ಪ್ರತಾಪ್ ಸಿಂಗ್ ಅವರನ್ನು ಬಂಧಿಸಿದ್ದು, ಸದ್ಯ ಅವರು ಲಕ್ನೋ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ.
ರಾಜ್ಯಾದ್ಯಂತ ನಡೆದ ದಾಳಿಯಲ್ಲಿ ಇದುವರೆಗೆ 4.5 ಕೋಟಿ ರೂ. ಮೌಲ್ಯದ 3.5 ಲಕ್ಷ ಬಾಟಲಿ ಕಾಫ್ ಸಿರಪ್ ವಶಪಡಿಸಿಕೊಳ್ಳಲಾಗಿದ್ದು, 32 ಜನರನ್ನು ಬಂಧಿಸಲಾಗಿದೆ. ಈ ದಂಧೆಯ ಮತ್ತೊಬ್ಬ ಕಿಂಗ್‌ಪಿನ್ ಶುಭಮ್ ಜೈಸ್ವಾಲ್ ದುಬೈಗೆ ಪರಾರಿಯಾಗಿದ್ದಾನೆ ಎಂದು ಶಂಕಿಸಲಾಗಿದ್ದು, ಆತನ ತಂದೆಯನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ: ‘ರೈಡ್ ಶ್ರೀಲೇಖಾ’ ಟು ಮೇಯರ್ ಶ್ರೀಲೇಖಾ : ಕೇರಳ ರಾಜಧಾನಿಯಲ್ಲಿ ಕಮಲ ಅರಳಿಸಿದ ಖಡಕ್ ಪೊಲೀಸ್ ಅಧಿಕಾರಿ ಯಾರು?



















