ಬೆಂಗಳೂರು: ಹೊಸ ವರ್ಷ ಸಮೀಪಿಸುತ್ತಿದೆ. 2025ನೇ ವರ್ಷ ಮುಗಿಯಲು ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಹೊಸ ವರ್ಷದ ರೆಸೊಲ್ಯೂಷನ್ ಗಳ ಪಟ್ಟಿಯನ್ನು ತಯಾರಿಸುತ್ತಿದ್ದಾರೆ. ಇವುಗಳ ಜತೆಗೆ, ಡಿಸೆಂಬರ್ 31 ಮುಗಿಯುವುದರೊಳಗೆ ಹಣಕಾಸಿಗೆ ಸಂಬಂಧಿಸಿದ ಕೆಲ ಪ್ರಕ್ರಿಯೆಗಳನ್ನು ಮುಗಿಸಬೇಕಾಗಿದೆ. ಇಲ್ಲದಿದ್ದರೆ ದಂಡ ವಿಧಿಸಲಾಗುತ್ತದೆ. ಹಾಗಾಗಿ, ಡಿಸೆಂಬರ್ 31ರೊಳಗೆ ಈ ಕೆಲಸಗಳನ್ನು ಮಾಡಿ ಮುಗಿಸಿ.
ಆಧಾರ್-ಪ್ಯಾನ್ ಲಿಂಕ್
ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಡಿಸೆಂಬರ್ 31 ಕೊನೆಯ ದಿನವಾಗಿದೆ. ಹಾಗಾಗಿ, ಕೂಡಲೇ ಸಾರ್ವಜನಿಕರು ಲಿಂಕ್ ಮಾಡಬೇಕು. ಇಲ್ಲದಿದ್ದರೆ, ಪ್ಯಾನ್ ಕಾರ್ಡ್ ಗಳೇ ನಿಷ್ಕ್ರಿಯವಾಗುತ್ತವೆ. ಸಾರ್ವಜನಿಕರು ಆನ್ ಲೈನ್ ಮೂಲಕವೇ ಸುಲಭವಾಗಿ ಆಧಾರ್ ಕಾರ್ಡಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಬಹುದಾಗಿದೆ. https://eportal.incometax.gov.in/iec/foservices/#/login ಭೇಟಿ ನೀಡಿ, ಅಗತ್ಯ ವಿವರಗಳನ್ನು ಒದಗಿಸಿ ಲಿಂಕ್ ಮಾಡಬಹುದಾಗಿದೆ.
ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ
2024-25ನೇ ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಡಿಸೆಂಬರ್ 31 ಕೊನೆಯ ದಿನವಾಗಿದೆ. ಹಾಗಾಗಿ, ಐಟಿಆರ್ ಸಲ್ಲಿಸದವರು ಕೂಡಲೇ ಸಲ್ಲಿಸಬೇಕಿದೆ. ಇಲ್ಲದಿದ್ದರೆ, ವಿಳಂಬಕ್ಕಾಗಿ ದಂಡ, ಬಾಕಿ ತೆರಿಗೆಗೆ ಹೆಚ್ಚಿನ ಬಡ್ಡಿ ಪಾವತಿಸಬೇಕಾಗುತ್ತದೆ.
ಅಡ್ವಾನ್ಸ್ ಟ್ಯಾಕ್ಸ್ ಪಾವತಿ
ತೆರಿಗೆದಾರರ ವಾರ್ಷಿಕ ತೆರಿಗೆ ಮೊತ್ತವು 10 ಸಾವಿರ ರೂ.ಗಿಂತ ಜಾಸ್ತಿ ಇದ್ದರೆ ಮೂರನೇ ಕಂತಿನ ಅಡ್ವಾನ್ಸ್ ತೆರಿಗೆ ಪಾವತಿಸಲು ಡಿಸೆಂಬರ್ 15 ಕೊನೆಯ ದಿನವಾಗಿದೆ. ಗಡುವು ಮುಗಿದರೆ ಸೆಕ್ಷನ್ 234 ಬಿ ಹಾಗೂ 234 ಸಿ ಅಡಿಯಲ್ಲಿ ಬಡ್ಡಿ ವಿಧಿಸಲಾಗುತ್ತದೆ. ಹಾಗೆಯೇ, ಹೆಚ್ಚುವರಿಯಾಗಿ ದಂಡವನ್ನೂ ಪಾವತಿಸಬೇಕಾಗುತ್ತದೆ. ತೆರಿಗೆದಾರರು, ಸಾಮಾನ್ಯ ನಾಗರಿಕರು ಡಿಸೆಂಬರ್ ಮುಗಿಯುವುದರೊಳಗೆ ಇಷ್ಟೂ ಪ್ರಕ್ರಿಯೆಗಳನ್ನು ಮುಗಿಸುವ ಮೂಲಕ ದಂಡ ಹಾಗೂ ಅಧಿಕ ಬಡ್ಡಿಯಿಂದ ಪಾರಾಗಬಹುದಾಗಿದೆ.
ಇದನ್ನೂ ಓದಿ: ನನ್ನನ್ನು ಊಟಕ್ಕೆ ಯಾರು ಕರ್ದಿಲ್ಲ, ರೂಂಗೆ ತರ್ಸ್ಕೊಂಡು ತಿಂದೆ ಅಷ್ಟೇ | ಶಿವಲಿಂಗೇಗೌಡ



















