ಇಸ್ಲಾಮಾಬಾದ್: ಪತ್ರಕರ್ತೆಯೊಬ್ಬರಿಗೆ ಪಾಕಿಸ್ತಾನ ಸೇನೆಯ ಐಎಸ್‌ಪಿಆರ್ ವಿಭಾಗದ ಮಹಾನಿರ್ದೇಶಕ ಅಹಮದ್ ಷರೀಫ್ ಚೌಧರಿ ಕಣ್ಣು ಹೊಡೆದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ನಂತರ, ಪಾಕಿಸ್ತಾನ ಸೇನಾ ವಕ್ತಾರರೂ ಆದ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ ಅವರು ವರದಿಗಾರ್ತಿಯೊಬ್ಬರಿಗೆ ಕಣ್ಣು ಹೊಡೆದಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ ಆಗಿ ತೀವ್ರ ಟೀಕೆಗೆ ಗುರಿಯಾಗಿದೆ.ಿ
ಅಹ್ಮದ್ ಷರೀಫ್ ಚೌಧರಿ ಅವರು ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಪತ್ರಕರ್ತೆ ಅಬ್ಸಾ ಕೋಮನ್ ಅವರು, ಇಮ್ರಾನ್ ಖಾನ್ ವಿರುದ್ಧ ಇರುವ “ರಾಷ್ಟ್ರೀಯ ಭದ್ರತೆಗೆ ಬೆದರಿಕೆ,” ಮತ್ತು “ದೆಹಲಿಯ ಕೈಗೊಂಬೆ” ಎಂಬ ಆರೋಪಗಳ ಕುರಿತು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಚೌಧರಿ, “ಇದಕ್ಕೆ ಇನ್ನೊಂದು ಅಂಶವನ್ನೂ ಸೇರಿಸಿ: ಅವರು ‘ಝೆಹನಿ ಮರೀಜ್’ (ಮಾನಸಿಕ ರೋಗಿ) ಕೂಡ ಹೌದು,” ಎಂದು ನುಡಿದರು. ನಂತರ ಅವರು ನಕ್ಕು ವರದಿಗಾರ್ತಿಗೆ ಕಣ್ಣು ಹೊಡೆದರು. ಈ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ಎಕ್ಸ್ (X) ಬಳಕೆದಾರರೊಬ್ಬರು, “ಇದು ಕ್ಯಾಮೆರಾ ಮುಂದೆ ಬಹಿರಂಗವಾಗಿ ನಡೆಯುತ್ತಿದೆ. ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವ ನಾಶವಾಗಿದೆ. ಪ್ರಧಾನಿ ಕೇವಲ ಕೈಗೊಂಬೆ,” ಎಂದು ಬರೆದಿದ್ದಾರೆ. ಮತ್ತೊಬ್ಬರು, “ರಾಷ್ಟ್ರದ ಮೀಮ್ (Meme of a nation),” ಎಂದು ಕಟುವಾಗಿ ಟೀಕಿಸಿದ್ದಾರೆ. ‘ವೃತ್ತಿಪರತೆ ಅಂತ್ಯವಾಗಿದೆ. ನೀವು ಪತ್ರಿಕಾಗೋಷ್ಠಿ ನಡೆಸುತ್ತಿದ್ದೀರೋ? ಅಥವಾ ಕೀಳು ಮಟ್ಟಕ್ಕಿಳಿದು ಪ್ರಣಯಚೇಷ್ಟೆ ಮಾಡುತ್ತಿದ್ದೀರಾ?’ ಎಂದೂ ಕೆಲವರು ಪ್ರಶ್ನಿಸಿದ್ದಾರೆ.
ಇಮ್ರಾನ್ ಖಾನ್ ಕುರಿತು ಚೌಧರಿ ಹೇಳಿಕೆ
ಕಣ್ಣು ಹೊಡೆದ ಘಟನೆಗೂ ಮುನ್ನ ಚೌಧರಿ ಅವರು ಇಮ್ರಾನ್ ಖಾನ್ ಅವರನ್ನು ಹೆಸರಿಸದೆ “ನಾರ್ಸಿಸಿಸ್ಟ್” ಎಂದು ಕರೆದಿದ್ದರು. ಅವರ ರಾಜಕೀಯ ಮಹತ್ವಾಕಾಂಕ್ಷೆಗಳು ತೀವ್ರ ಮಟ್ಟಕ್ಕೆ ಹೋಗಿ, “ನಾನು ಅಧಿಕಾರದಲ್ಲಿ ಇಲ್ಲದಿದ್ದರೆ, ಬೇರೇನೂ ಅಸ್ತಿತ್ವದಲ್ಲಿರಬಾರದು,” ಎಂದು ಅವರು ನಂಬಿದ್ದಾರೆ ಎಂದು ಹೇಳಿದ್ದರು.
ಇದೇ ವೇಳೆ, ಜೈಲಿನಲ್ಲಿ ಇಮ್ರಾನ್ ಖಾನ್ ಅವರನ್ನು ಭೇಟಿ ಮಾಡುತ್ತಿರುವ ವ್ಯಕ್ತಿಗಳನ್ನು “ಸೇನೆ ವಿರುದ್ಧ ವಿಷ ಹರಡಲು” ಬಳಸಲಾಗುತ್ತಿದೆ ಎಂದು ಚೌಧರಿ ಆರೋಪಿಸಿದರು. ಸೇನೆಯ ವಿರುದ್ಧ ದ್ವೇಷವನ್ನು ಉಂಟುಮಾಡಲು ಖಾನ್ ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, “ಪಾಕಿಸ್ತಾನದ ಮಿಲಿಟರಿ ಮತ್ತು ಅದರ ಜನರ ನಡುವೆ ಬಿರುಕು ಮೂಡಿಸಲು ನಾವು ಯಾರಿಗೂ ಅವಕಾಶ ನೀಡುವುದಿಲ್ಲ,” ಎಂದು ಸ್ಪಷ್ಟಪಡಿಸಿದರು.
ಅಲ್ಲದೆ, ರಾವಲ್ಪಿಂಡಿ ಪ್ರಧಾನ ಕಚೇರಿ ಸೇರಿದಂತೆ ಮೇ 9, 2023ರ ಮಿಲಿಟರಿ ಸೌಲಭ್ಯಗಳ ಮೇಲಿನ ದಾಳಿಗೆ ಖಾನ್ ಅವರೇ ಕಾರಣ ಎಂದು ಸೇನೆಯ ಹಳೆಯ ಆರೋಪವನ್ನು ಅವರು ಪುನರುಚ್ಚರಿಸಿದರು.
ಇದನ್ನೂ ಓದಿ : ಮೈಸೂರು ಮಹರಾಜರ ಊಟದಲ್ಲಿ ವಿಷ ಹಾಕ್ದೋರು ಟಿಪ್ಪು | ಎಸ್.ಮುನಿಸ್ವಾಮಿ ವಾಗ್ದಾಳಿ



















