ಮುಂಬೈ: ಇಂಡಿಗೋ ವಿಮಾನಯಾನ ಸಂಸ್ಥೆಯಲ್ಲಿನ ತಾಂತ್ರಿಕ ದೋಷ ಹಾಗೂ ವಿಮಾನಗಳ ರದ್ದತಿಯ ಬಿಸಿ ಬಾಲಿವುಡ್ ಸೆಲೆಬ್ರಿಟಿಗಳಿಗೂ ತಟ್ಟಿದೆ. ಜನಪ್ರಿಯ ಗಾಯಕ ರಾಹುಲ್ ವೈದ್ಯ ಅವರು ಗೋವಾದಿಂದ ಮುಂಬೈಗೆ ತಲುಪಲು ಬರೋಬ್ಬರಿ 4.2 ಲಕ್ಷ ರೂ.ಗಳನ್ನು ವಿಮಾನದ ಟಿಕೆಟ್‌ಗಾಗಿ ವ್ಯಯಿಸಬೇಕಾದ ಪ್ರಸಂಗ ಎದುರಾಗಿದೆ. ಇಂಡಿಗೋ ಸಂಸ್ಥೆಯು ಗುರುವಾರ ನೂರಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿದ್ದರಿಂದ ದೇಶಾದ್ಯಂತ ಪ್ರಯಾಣಿಕರು ಪರದಾಡುವಂತಾಗಿದ್ದು, ರಾಹುಲ್ ವೈದ್ಯ ಕೂಡ ಈ ಅವ್ಯವಸ್ಥೆಗೆ ಸಾಕ್ಷಿಯಾಗಿದ್ದಾರೆ.
ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಅಸಮಾಧಾನ ಹೊರಹಾಕಿರುವ ರಾಹುಲ್, “ಇದು ವಿಮಾನದಲ್ಲಿ ಪ್ರಯಾಣಿಸಲು ಅತ್ಯಂತ ಕೆಟ್ಟ ದಿನಗಳಲ್ಲಿ ಒಂದಾಗಿದೆ. ಇಂದು ರಾತ್ರಿ ಕೋಲ್ಕತ್ತಾದಲ್ಲಿ ನನಗೆ ಕಾರ್ಯಕ್ರಮವಿದೆ, ಆದರೆ ಅಲ್ಲಿಗೆ ಹೇಗೆ ತಲುಪುವುದು ಎಂಬುದೇ ತಿಳಿಯುತ್ತಿಲ್ಲ,” ಎಂದು ಬರೆದುಕೊಂಡಿದ್ದಾರೆ. ಗೋವಾದಿಂದ ಮುಂಬೈಗೆ ಬರಲು ತಾವು ಖರೀದಿಸಿದ ಟಿಕೆಟ್‌ಗಳ ಫೋಟೋವನ್ನು ಹಂಚಿಕೊಂಡಿರುವ ಅವರು, “ಈ ಬೋರ್ಡಿಂಗ್ ಪಾಸ್‌ಗಳ ಬೆಲೆ 4.20 ಲಕ್ಷ ರೂ.ಗಳು. ಇದು ಕೇವಲ ಮುಂಬೈ ವರೆಗಿನ ಪ್ರಯಾಣಕ್ಕೆ ಮಾತ್ರ. ಮುಂಬೈನಿಂದ ಕೋಲ್ಕತ್ತಾಗೆ ಹೋಗಲು ಪ್ರತ್ಯೇಕ ಖರ್ಚು ಮಾಡಬೇಕಿದೆ. ಇದು ನನ್ನ ಜೀವನದಲ್ಲೇ ಅತ್ಯಂತ ದುಬಾರಿ ದೇಶೀಯ ವಿಮಾನ ಪ್ರಯಾಣ,” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನೊಂದೆಡೆ ಕಿರುತೆರೆ ನಟಿ ನಿಯಾ ಶರ್ಮಾ ಕೂಡ ಇದೇ ರೀತಿಯ ಸಂಕಷ್ಟಕ್ಕೆ ಸಿಲುಕಿದ್ದು, ದೇಶೀಯ ಪ್ರಯಾಣವೊಂದಕ್ಕಾಗಿ 54 ಸಾವಿರ ರೂ.ಗಳನ್ನು ನೀಡಬೇಕಾಯಿತು ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇಂಡಿಗೋ ಸಂಸ್ಥೆಯು ದಿನಕ್ಕೆ ಸುಮಾರು 170 ರಿಂದ 200 ವಿಮಾನಗಳನ್ನು ರದ್ದುಗೊಳಿಸುತ್ತಿರುವುದರಿಂದ ಪ್ರಯಾಣಿಕರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಈ ಬಗ್ಗೆ ಕ್ಷಮೆಯಾಚಿಸಿರುವ ಇಂಡಿಗೋ, ಪರಿಸ್ಥಿತಿಯನ್ನು ಸುಧಾರಿಸಲು ಮತ್ತು ವಿಮಾನಗಳ ಕಾರ್ಯಾಚರಣೆಯನ್ನು ಸಹಜ ಸ್ಥಿತಿಗೆ ತರಲು ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ಡಿಜಿಸಿಎ (DGCA) ಜೊತೆಗೆ ಸೇರಿ ಶ್ರಮಿಸುತ್ತಿರುವುದಾಗಿ ತಿಳಿಸಿದೆ.
ಇದನ್ನೂ ಓದಿ: ಇಂಡಿಗೋ ವಿಮಾನಗಳ ರದ್ದು : ದೇಶಾದ್ಯಂತ ಪ್ರಯಾಣಿಕರ ಪರದಾಟ, ವಿಮಾನ ನಿಲ್ದಾಣಗಳಲ್ಲಿ ಲಗೇಜ್‌ಗಳ ರಾಶಿ



















