ಬೆಂಗಳೂರು: ಡಿಸೆಂಬರ್ ತಿಂಗಳ ಮೊದಲ ದಿನವೇ ದೇಶದ ವ್ಯಾಪಾರಿಗಳಿಗೆ, ಸಾರ್ವಜನಿಕರಿಗೆ ಸಿಹಿ ಸುದ್ದಿ ದೊರೆತಿದೆ. ಹೌದು, ವಾಣಿಜ್ಯ ಬಳಕೆ ಎಲ್ ಪಿಜಿ( LPG) ಸಿಲಿಂಡರ್ ಬೆಲೆಯಲ್ಲಿ 10 ರೂಪಾಯಿಯನ್ನು ತೈಲ ಕಂಪನಿಗಳು ಇಳಿಕೆ ಮಾಡಿವೆ. ಇದರಿಂದಾಗಿ, ಹೋಟೆಲ್ ಸೇರಿ ಹಲವು ಉದ್ಯಮದಲ್ಲಿ ತೊಡಗಿದವರಿಗೆ ಸಿಹಿ ಸುದ್ದಿಯಾಗಿದೆ. ಹಾಗೆಯೇ, ಹೋಟೆಲ್ ಗಳಲ್ಲಿ ತಿಂಡಿ-ತಿನಿಸುಗಳ ಬೆಲೆಯಲ್ಲಿ ಅಲ್ಪ ಇಳಿಕೆಯೂ ಆಗುವ ಸಾಧ್ಯತೆ ಇದೆ.
ದೇಶಾದ್ಯಂತ 19 ಕೆ.ಜಿ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯಲ್ಲಿ 10 ರೂಪಾಯಿ ಇಳಿಕೆ ಮಾಡಲಾಗಿದೆ. ಪ್ರತಿ ತಿಂಗಳ ಮೊದಲ ದಿನದಂದು ತೈಲ ಕಂಪನಿಗಳು ಅಡುಗೆ ಅನಿಲ ಹಾಗೂ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಗಳನ್ನು ಪರಿಷ್ಕರಣೆ ಮಾಡುತ್ತವೆ. ಅದರಂತೆ, ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯನ್ನು ಈಗ ಇಳಿಕೆ ಮಾಡಿವೆ. ಇನ್ನು, ಗೃಹಬಳಕೆ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಬೆಲೆ ಇಳಿಕೆಯ ನಂತರ ದಿಲ್ಲಿಯಲ್ಲಿ 19 ಕೆ.ಜಿ ಸಿಲಿಂಡರ್ ಬೆಲೆ 1,580 ರೂಪಾಯಿ ಆಗಿದೆ. ಅದೇ ರೀತಿ ಕೋಲ್ಕತ್ತಾದಲ್ಲಿ 1,531 ರೂಪಾಯಿ ಇದೆ. ಇನ್ನು ಬೆಂಗಳೂರಿನಲ್ಲಿ ಒಂದು ಸಿಲಿಂಡರ್ ಬೆಲೆ 1,654 ರೂಪಾಯಿ ಇದೆ.
ಕಳೆದ ಕೆಲ ತಿಂಗಳಿಂದ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯನ್ನು ಇಳಿಕೆ ಮಾಡಲಾಗುತ್ತಿದೆ. ಸೆಪ್ಟೆಂಬರ್ ನಲ್ಲಿ 51 ರೂಪಾಯಿ ಇಳಿಕೆ ಮಾಡಲಾಗಿತ್ತು. ಆದರೆ, ಅಕ್ಟೋಬರ್ ನಲ್ಲಿ 16 ರೂಪಾಯಿ ಜಾಸ್ತಿ ಮಾಡಲಾಗಿತ್ತು. ಆದಾಗ್ಯೂ, ನವೆಂಬರ್ ನಲ್ಲಿ 5 ರೂಪಾಯಿ ಇಳಿಕೆ ಮಾಡಲಾಗಿತ್ತು. ಈಗ ಮತ್ತೆ ಇಳಿಕೆ ಮಾಡಿರುವ ಕಾರಣ ವ್ಯಾಪಾರಿಗಳಿಗೆ ಅನುಕೂಲವಾಗಿದೆ.
ಇದನ್ನೂ ಓದಿ: ತಮಿಳುನಾಡು, ಪುದುಚೇರಿಯಲ್ಲಿ ದಿತ್ವಾ ಸೈಕ್ಲೋನ್ ಅಬ್ಬರ | ಬೆಂಗಳೂರಲ್ಲಿ ಕನಿಷ್ಠ ಮಟ್ಟಕ್ಕೆ ಇಳಿದ ತಾಪಮಾನ



















