ಬೆಂಗಳೂರು: ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಅಧಿಕಾರ ಹಂಚಿಕೆಯ ಜಟಾಪಟಿ ಜೋರಾಗಿರುವ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಇಂದು ಬೆಳಗ್ಗೆ ಉಪಹಾರಕ್ಕೆ ಆಹ್ವಾನಿಸುವ ಮೂಲಕ ಮುಖಾಮುಖಿ ಬೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ನಿರ್ದೇಶನದ ಮೇರೆಗೆ ಇಬ್ಬರೂ ಮುಖಂಡರು ಇಂದು ಬೆಳಗ್ಗೆ ನೇರವಾಗಿ ಭೇಟಿಯಾಗಿ ಸಿಎಂ ಅಧಿಕಾರ ಹಂಚಿಕೆ ಕುರಿತು ಪರಸ್ಪರ ಚರ್ಚೆ ನಡೆಸಲಿದ್ದಾರೆ ಎಂದು ಹೇಳಲಾಗುತ್ತದೆ. ಇಲ್ಲಿಯವರೆಗೆ ಪರೋಕ್ಷವಾಗಿ ತೆರೆಮರೆಯಲ್ಲಿ ಸಿಎಂ ಬದಲಾವಣೆ ಕುರಿತು ವ್ಯಕ್ತವಾಗುತ್ತಿದ್ದ ಅಭಿಪ್ರಾಯದ ಬಗ್ಗೆ ಉಭಯ ಮುಖಂಡರು ನೇರವಾಗಿ ಮಾತುಕತೆ ನಡೆಸುವ ಸಾಧ್ಯತೆಗಳಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಬೆಳಗ್ಗೆ ತಮ್ಮ ಕಾವೇರಿ ನಿವಾಸದಲ್ಲಿ ಬ್ರೇಕ್ ಫಾಸ್ಟ್ಗಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಆಹ್ವಾನಿಸಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಅಧಿಕಾರ ಹಂಚಿಕೆ ಕುರಿತು ಪ್ರಮುಖವಾಗಿ ಮಾತುಕತೆ ನಡೆಸಿ ತಮ್ಮ ತಮ್ಮ ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ. ಸಭೆಯಲ್ಲಿ ತಗೆದುಕೊಂಡ ತೀರ್ಮಾನವನ್ನು ಪಕ್ಷದ ಹೈಕಮಾಂಡ್ ಗಮನಕ್ಕೆ ತರಲಿದ್ದಾರೆ ಎನ್ನಲಾಗುತ್ತದೆ.
ಐದು ವರ್ಷಗಳ ಕಾಲ ತಾವೇ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತೇನೆ ಎಂದು ಸಾರ್ವಜನಿಕವಾಗಿ ತಿಳಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧವಾಗಿರುವುದಾಗಿಯೂ ಹೇಳಿದ್ದಾರೆ. ಇನ್ನೊಂದೆಡೆ ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಎರಡೂವರೆ ವರ್ಷ ಅವಧಿಯ ಆಡಳಿತ ಪೂರೈಸಿರುವ ಸಿಎಂ ಸಿದ್ಧರಾಮಯ್ಯನವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಬದಲಾಯಿಸಿ ತಮಗೆ ಮುಖ್ಯಮಂತ್ರಿ ಜವಾಬ್ದಾರಿ ನೀಡುವಂತೆ ಒತ್ತಡ ಹಾಕಿದ್ದಾರೆ.
ಕಾಂಗ್ರೆಸ್ ಪಕ್ಷದ ವರಿಷ್ಠರು ತಮಗೆ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಇಬ್ಬರಿಗೂ ಕರೆ ಮಾಡಿ ನೀವಿಬ್ಬರೂ ಭೇಟಿ ಮಾಡಿ ಎಂದು ತಿಳಿಸಿರುತ್ತಾರೆ. ಹಾಗಾಗಿ ಅವರನ್ನು ನಾನು ಉಪಹಾರಕ್ಕಾಗಿ ಕರೆದಿದ್ದು, ಅಲ್ಲಿ ಚರ್ಚೆ ಮಾಡುತ್ತೇವೆ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸಹ ಹೈಕಮಾಂಡ್ ಹೇಳಿದ್ದನ್ನು ಒಪ್ಪುವುದಾಗಿ ಹೇಳಿದ್ದಾರೆ ಎಂದು ಸಿಎಂ ತಿಳಿಸಿದ್ದಾರೆ.
ಇದನ್ನೂ ಓದಿ: ಸದ್ಯದಲ್ಲೇ ದೈಹಿಕ ಶಿಕ್ಷಕರ ನೇಮಕಾತಿ ಆಗುತ್ತೆ | ಸಚಿವ ಮಧು ಬಂಗಾರಪ್ಪ



















