ಹೊಸದಿಲ್ಲಿ: 2026ರ ಟಿ20 ವಿಶ್ವಕಪ್ ಟೂರ್ನಿಗೆ ಭಾರತದ ಸಿದ್ಧತೆ ಅಂತಿಮ ಹಂತ ತಲುಪಿದೆ. ಅಜಿತ್ ಅಗರ್ಕರ್ ನೇತೃತ್ವದ ರಾಷ್ಟ್ರೀಯ ಆಯ್ಕೆ ಸಮಿತಿಯು ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದು, ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿ ಹಾಗೂ ಅದಾದ ಬಳಿಕ ನಡೆಯಲಿರುವ ಪ್ರತಿಷ್ಠಿತ ಟಿ20 ವಿಶ್ವಕಪ್‌ಗೆ ಒಂದೇ ತಂಡವನ್ನು ಉಳಿಸಿಕೊಳ್ಳಲು ನಿರ್ಧರಿಸಿದೆ. ಈ ಮೂಲಕ ತಂಡದಲ್ಲಿನ ಅನಿಶ್ಚಿತತೆಯನ್ನು ಹೋಗಲಾಡಿಸಿ, ಆಟಗಾರರಿಗೆ ತಮ್ಮ ಸ್ಥಾನದ ಬಗ್ಗೆ ಸ್ಪಷ್ಟತೆ ನೀಡುವ ತಂತ್ರಕ್ಕೆ ಬಿಸಿಸಿಐ ಮುಂದಾಗಿದೆ.
ಬದಲಾವಣೆಗಳಿಗೆ ಬ್ರೇಕ್, ಸ್ಥಿರತೆಗೆ ಮಣೆ
ವಿಶ್ವಕಪ್‌ಗೆ ಮುನ್ನ ಟೀಂ ಇಂಡಿಯಾ ಕೈಯಲ್ಲಿರುವುದು ಕೇವಲ 10 ಟಿ20 ಪಂದ್ಯಗಳು ಮಾತ್ರ. ದಕ್ಷಿಣ ಆಫ್ರಿಕಾ ವಿರುದ್ಧ 5 ಮತ್ತು ನ್ಯೂಜಿಲೆಂಡ್ ವಿರುದ್ಧ 5 ಪಂದ್ಯಗಳನ್ನಾಡಲಿರುವ ಭಾರತ, ಕಿವೀಸ್ ಸರಣಿಯನ್ನೇ ವಿಶ್ವಕಪ್‌ಗೆ ‘ಡ್ರೆಸ್ ರಿಹರ್ಸಲ್’ ಎಂದು ಪರಿಗಣಿಸಿದೆ. ಬಿಸಿಸಿಐ ಮೂಲಗಳ ಪ್ರಕಾರ, ನ್ಯೂಜಿಲೆಂಡ್ ವಿರುದ್ಧ ಆಯ್ಕೆಯಾಗುವ 15 ಆಟಗಾರರ ಪಡೆಯೇ ವಿಶ್ವಕಪ್‌ಗೂ ತೆರಳಲಿದೆ. ಗಾಯದ ಸಮಸ್ಯೆಗಳು ಎದುರಾದರೆ ಮಾತ್ರ ತಂಡದಲ್ಲಿ ಬದಲಾವಣೆ ಮಾಡಲಾಗುವುದು, ಇಲ್ಲದಿದ್ದರೆ ಅನಗತ್ಯ ಪ್ರಯೋಗಗಳಿಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಜನವರಿ 21ರಿಂದ ಆರಂಭವಾಗುವ ಕಿವೀಸ್ ಸರಣಿಗೂ ಮುನ್ನ ತಂಡದಲ್ಲಿ ಸ್ಥಿರತೆ ಕಾಪಾಡಿಕೊಳ್ಳುವುದು ಆಯ್ಕೆ ಸಮಿತಿಯ ಪ್ರಮುಖ ಉದ್ದೇಶವಾಗಿದೆ.
ಸಮಯದ ಅಭಾವ ಮತ್ತು ಐಸಿಸಿ ನಿಯಮ
ಈ ನಿರ್ಧಾರದ ಹಿಂದೆ ಪ್ರಮುಖ ತಾಂತ್ರಿಕ ಕಾರಣವೂ ಇದೆ. 2026ರ ಫೆಬ್ರವರಿ 7ರಂದು ವಿಶ್ವಕಪ್ ಟೂರ್ನಿ ಆರಂಭವಾಗುವ ನಿರೀಕ್ಷೆಯಿದೆ. ಐಸಿಸಿ ನಿಯಮಗಳ ಪ್ರಕಾರ, ಟೂರ್ನಿ ಆರಂಭಕ್ಕೂ ಒಂದು ತಿಂಗಳ ಮುನ್ನವೇ ಅಂತಿಮ ತಂಡವನ್ನು ಪ್ರಕಟಿಸಬೇಕಾಗುತ್ತದೆ. ನ್ಯೂಜಿಲೆಂಡ್ ಸರಣಿಯು ಜನವರಿ 31ಕ್ಕೆ ಮುಕ್ತಾಯವಾಗಲಿದ್ದು, ವಿಶ್ವಕಪ್ ಆರಂಭಕ್ಕೆ ಕೇವಲ ಒಂದು ವಾರದ ಅಂತರವಿರುತ್ತದೆ. ಇಂತಹ ಸಂದರ್ಭದಲ್ಲಿ ಕಿವೀಸ್ ವಿರುದ್ಧ ಆಡುವ ಆಟಗಾರರನ್ನೇ ವಿಶ್ವಕಪ್‌ಗೂ ಕಳುಹಿಸುವುದು ಜಾಣತನದ ನಡೆಯಾಗಲಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ 2024ರ ಟಿ20 ವಿಶ್ವಕಪ್ ಗೆದ್ದಾಗಲೂ ಇದೇ ರೀತಿಯ ಸ್ಥಿರತೆಯನ್ನು ಕಾಯ್ದುಕೊಳ್ಳಲಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಗಂಭೀರ್-ಸೂರ್ಯ ಜೋಡಿಗೆ ಆಫ್ರಿಕಾ ಸರಣಿಯೇ ಕೊನೆ ಅವಕಾಶ
ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ಸೂರ್ಯಕುಮಾರ್ ಯಾದವ್ ಅವರಿಗೆ ಹೊಸ ಆಟಗಾರರನ್ನು ಪರೀಕ್ಷಿಸಲು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯೇ ಕೊನೆಯ ಅವಕಾಶವಾಗಲಿದೆ. ಆ ಬಳಿಕ ನಡೆಯುವ ನ್ಯೂಜಿಲೆಂಡ್ ಸರಣಿಯು ಸಂಪೂರ್ಣವಾಗಿ ವಿಶ್ವಕಪ್‌ಗೆ ಸಜ್ಜಾಗುವ ವೇದಿಕೆಯಾಗಲಿದೆ. ಕಿವೀಸ್ ವಿರುದ್ಧದ ಪಂದ್ಯಗಳು ನಾಗ್ಪುರ (ಜ.21), ರಾಯ್ಪುರ (ಜ.23), ಗುವಾಹಟಿ (ಜ.25), ವೈಜಾಗ್ (ಜ.28) ಮತ್ತು ತಿರುವನಂತಪುರಂನಲ್ಲಿ (ಜ.31) ನಡೆಯಲಿವೆ.
ಚಾಂಪಿಯನ್ಸ್ ಟ್ರೋಫಿಯ ಪಾಠ
ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಸಂದರ್ಭದಲ್ಲಿ ಆದ ಎಡವಟ್ಟನ್ನು ಪುನರಾವರ್ತಿಸದಿರಲು ಆಯ್ಕೆ ಸಮಿತಿ ನಿರ್ಧರಿಸಿದೆ. ಅಂದು ಆರಂಭಿಕ 15ರ ಬಳಗದಲ್ಲಿ ಯಶಸ್ವಿ ಜೈಸ್ವಾಲ್ ಅವರನ್ನು ಹೆಸರಿಸಲಾಗಿತ್ತಾದರೂ, ದುಬೈ ಪಿಚ್‌ಗಳ ಸ್ವರೂಪ ಮತ್ತು ಮಿಸ್ಟರಿ ಸ್ಪಿನ್ನರ್ ಅಗತ್ಯವಿದ್ದ ಕಾರಣ ಕೊನೆಯ ಕ್ಷಣದಲ್ಲಿ ಅವರನ್ನು ಕೈಬಿಟ್ಟು ವರುಣ್ ಚಕ್ರವರ್ತಿ ಅವರಿಗೆ ಸ್ಥಾನ ನೀಡಲಾಗಿತ್ತು. ಇಂಗ್ಲೆಂಡ್ ಸರಣಿಯಲ್ಲಿನ ಪ್ರದರ್ಶನವನ್ನು ಆಧರಿಸಿ ಮಾಡಿದ ಇಂತಹ ಹಠಾತ್ ಬದಲಾವಣೆಗಳು ತಂಡದ ಆತ್ಮವಿಶ್ವಾಸದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಈ ಬಾರಿ ಅಂತಹ ಗೊಂದಲಗಳಿಗೆ ಆಸ್ಪದ ನೀಡದೆ, ನ್ಯೂಜಿಲೆಂಡ್ ಸರಣಿಗೂ ಮುನ್ನವೇ ಅಂತಿಮ ಪಡೆಯನ್ನು ಸಿದ್ಧಪಡಿಸಲು ಅಗರ್ಕರ್ ಪಡೆ ತೀರ್ಮಾನಿಸಿದೆ.
ಇದನ್ನೂ ಓದಿ: ಗುವಾಹಟಿ ಟೆಸ್ಟ್‌ಗೆ ಅಶ್ವಿನ್ ‘ಮಾಸ್ಟರ್ ಪ್ಲಾನ್’ ; ಆಡುವ ಬಳಗದಲ್ಲಿ ಮಹತ್ವದ ಬದಲಾವಣೆ ಸೂಚಿಸಿದ ಸ್ಪಿನ್ ಮಾಂತ್ರಿಕ



















