ಬೆಂಗಳೂರು: ದೇಶಾದ್ಯಂತ ಮದುವೆ ಸೀಸನ್ ಆರಂಭವಾಗಿದೆ. ನವೆಂಬರ್ 1ರಿಂದ ಡಿಸೆಂಬರ್ 14ರ ಅವಧಿಯಲ್ಲಿಯೇ ದೇಶದಲ್ಲಿ 46 ಲಕ್ಷ ಮದುವೆಗಳು ನಡೆಯಲಿವೆ ಎಂದು ವರದಿಗಳು ತಿಳಿಸಿವೆ. ಮದುವೆ ಸೀಸನ್ ಆರಂಭವಾಗುತ್ತಲೇ ದೇಶದ ಜನ ಹೆಚ್ಚಿನ ಪ್ರಮಾಣದಲ್ಲಿ ಚಿನ್ನಾಭರಣ ಖರೀದಿಸುತ್ತಾರೆ. ಆದರೆ, ಚಿನ್ನ ಖರೀದಿಸುವಾಗ ಒಂದಷ್ಟು ನಿಯಮಗಳು ಗೊತ್ತಿರಬೇಕು. ಇಲ್ಲದಿದ್ದರೆ, ನಿಮ್ಮ ಬಳಿ ದುಡ್ಡಿದ್ದರೂ ಕೆಲವೊಮ್ಮೆ ಚಿನ್ನ ಖರೀದಿಸಲು ಆಗುವುದಿಲ್ಲ. ಅರೆ, ಇದಾವುದಪ್ಪಾ ನಿಯಮ ಅಂತೀರಾ? ಇಲ್ಲಿದೆ ಮಾಹಿತಿ.
ಹೌದು, ಚಿನ್ನದ ಮಳಿಗೆಗಳಲ್ಲಿ ಚಿನ್ನ ಖರೀದಿಸುವಾಗ ಆಧಾರ್ ಹಾಗೂ ಪ್ಯಾನ್ ಕಾರ್ಡ್ ನೀಡಬೇಕಾಗುತ್ತದೆ. ನೀವೇನಾದರೂ, 2 ಲಕ್ಷ ರೂಪಾಯಿಗಿಂತ ಹೆಚ್ಚಿನ ಮೌಲ್ಯದ ಚಿನ್ನ ಖರೀದಿಸಲು ಮುಂದಾದರೆ, ನೀವು ಕಡ್ಡಾಯವಾಗಿ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಕೊಡಬೇಕು. ಇಲ್ಲದಿದ್ದರೆ, ನಿಮಗೆ ಮಳಿಗೆಯವರು ಚಿನ್ನವನ್ನು ಮಾರಾಟ ಮಾಡುವುದಿಲ್ಲ.
ನೀವು ಚಿನ್ನ ಖರೀದಿಸಿದ ಬಳಿಕ ನಗದು ರೂಪದಲ್ಲಾದರೂ ಕೊಡಿ, ಆನ್ ಲೈನ್, ನೆಟ್ ಬ್ಯಾಂಕಿಂಗ್ ಮೂಲಕವಾದರೂ ಹಣ ಪಾವತಿಸಿ, ಅದಕ್ಕೆ ಪ್ಯಾನ್ ಹಾಗೂ ಆಧಾರ್ ಕಾರ್ಡ್ ನೀಡಬೇಕಾಗಿರುವುದು ಕಡ್ಡಾಯವಾಗಿದೆ. ಕಪ್ಪು ಹಣವನ್ನು ತಡೆಯುವ ದೃಷ್ಟಿಯಿಂದ ಇಂತಹ ನಿಯಮಗಳನ್ನು ಜಾರಿಗೆ ತರಲಾಗಿದೆ. 2 ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತದ ಬಂಗಾರವನ್ನು ಖರೀದಿಸಿದರೆ, ಆಗ ನಗದು ಸ್ವೀಕರಿಸುವುದಿಲ್ಲ. ಕ್ಯಾಶ್ ಮೂಲಕ ಪಾವತಿಸದೆ, ಆನ್ ಲೈನ್ ಮೂಲಕ ಪಾವತಿ ಮಾಡಬೇಕಾಗುತ್ತದೆ.
ಜಿಎಸ್ ಟಿ ಬಗ್ಗೆ ಗೊತ್ತಿರಲಿ
ಚಿನ್ನಾಭರಣ ಖರೀದಿ ಮಾಡುವಾಗಲೂ ಜಿಎಸ್ ಟಿ ಅನ್ವಯವಾಗುತ್ತದೆ. ಖರೀದಿಸಿದ ಚಿನ್ನದ ಒಟ್ಟು ಮೌಲ್ಯದ ಮೇಲೆ ಶೇ.3ರಷ್ಟು ಜಿಎಸ್ ಟಿ ಪಾವತಿಸಬೇಕು. ಹಾಗೆಯೇ, ಚಿನ್ನದ ಮೇಕಿಂಗ್ ಚಾರ್ಜಸ್ ಮೇಲೆ ಶೇ.5ರಷ್ಟು ಜಿಎಸ್ ಟಿ ಪಾವತಿ ಮಾಡಬೇಕು. ಅಲ್ಲಿಗೆ, ಒಟ್ಟು ಶೇ.8ರಷ್ಟು ಜಿಎಸ್ ಟಿ ಪಾವತಿಸಬೇಕಾಗುತ್ತದೆ.
ಇದನ್ನೂ ಓದಿ; ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕನಾಗಿ ತೇಜಸ್ವಿ ಯಾದವ್ ಆಯ್ಕೆ



















