ನವದೆಹಲಿ: ದೆಹಲಿಯ ಕೆಂಪುಕೋಟೆ ಬಳಿ ಕಳೆದ ವಾರ ನಡೆದ ಕಾರು ಬಾಂಬ್ ಸ್ಫೋಟ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಜೈಶ್-ಎ-ಮೊಹಮ್ಮದ್ (JeM) ಉಗ್ರ ಸಂಘಟನೆಯ ‘ವೈಟ್-ಕಾಲರ್’ ಭಯೋತ್ಪಾದಕ ಜಾಲವು ರೂಪಿಸಿದ್ದ ಮತ್ತೊಂದು ಭೀಕರ ಸಂಚು ಬಯಲಾಗಿದೆ. ಬಾಬರಿ ಮಸೀದಿ ಧ್ವಂಸದ ವಾರ್ಷಿಕೋತ್ಸವವಾದ ಡಿಸೆಂಬರ್ 6 ರಂದು ದೊಡ್ಡ ಮಟ್ಟದ ಫಿದಾಯೀನ್ (ಆತ್ಮಹತ್ಯಾ) ದಾಳಿ ನಡೆಸಲು ಉಗ್ರರು ಯೋಜನೆ ರೂಪಿಸಿದ್ದು, ಇದಕ್ಕೆ ‘ಆಪರೇಷನ್ ಡಿ-6’ ಎಂದು ಹೆಸರು ನೀಡಿದ್ದರು ಎಂಬ ಆಘಾತಕಾರಿ ಮಾಹಿತಿ ತನಿಖಾ ಸಂಸ್ಥೆಗಳಿಗೆ ಲಭ್ಯವಾಗಿದೆ.
‘ಆಪರೇಷನ್ ಡಿ-6’ ಸಂಚು ಬಯಲಾಗಿದ್ದು ಹೇಗೆ?
ಫರೀದಾಬಾದ್ ಮತ್ತು ಜಮ್ಮು-ಕಾಶ್ಮೀರದಲ್ಲಿ ಬಂಧಿತರಾದ ಶಂಕಿತ ಉಗ್ರರ ವಿಚಾರಣೆ ವೇಳೆ ಈ ಸಂಚಿನ ವಿವರಗಳು ಬಹಿರಂಗಗೊಂಡಿವೆ. ಬಂಧಿತರಿಂದ ವಶಪಡಿಸಿಕೊಳ್ಳಲಾದ ಡೈರಿಗಳು ಮತ್ತು ಡಿಜಿಟಲ್ ಸಾಕ್ಷ್ಯಗಳಲ್ಲಿ ‘ಆಪರೇಷನ್ ಡಿ-6’ ಬಗ್ಗೆ ಉಲ್ಲೇಖವಿದ್ದು, ಕಾರು ಬಳಸಿ ಆತ್ಮಹತ್ಯಾ ದಾಳಿ ನಡೆಸಲು ವಾರಗಳಿಂದ ಸಿದ್ಧತೆ ನಡೆದಿತ್ತು ಎಂಬುದು ಸ್ಪಷ್ಟವಾಗಿದೆ.
ಸ್ಫೋಟದ ಪ್ರಮುಖ ಸಂಚುಕೋರರು
ಕೆಂಪುಕೋಟೆ ಬಳಿಯ ಸ್ಫೋಟದಲ್ಲಿ ಹತನಾದ ಉಗ್ರ, ಫರೀದಾಬಾದ್‌ನ ಅಲ್-ಫಲಾಹ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಉಮರ್ ನಬಿ ಮತ್ತು ಈಗಾಗಲೇ ಬಂಧನದಲ್ಲಿರುವ ಡಾ. ಶಹೀನ್ ಶಹೀದ್ ಈ ಸಂಚಿನ ಪ್ರಮುಖ ಸೂತ್ರಧಾರರಾಗಿದ್ದರು. ಡಿಸೆಂಬರ್ 6ರ ದಾಳಿಗಾಗಿಯೇ ಫರೀದಾಬಾದ್‌ನಲ್ಲಿ ಭಾರಿ ಪ್ರಮಾಣದ ಸ್ಫೋಟಕಗಳನ್ನು ಸಂಗ್ರಹಿಸಿಡಲಾಗಿತ್ತು. ಹಲವಾರು ಯುವಕರಿಗೆ ಫಿದಾಯೀನ್ ದಾಳಿಯ ತರಬೇತಿ ನೀಡಲು ಮತ್ತು ಅವರ ಬ್ರೈನ್‌ವಾಶ್ ಮಾಡಲು ಉಮರ್ ಪ್ರಯತ್ನಿಸಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಡಾ. ಶಹೀನ್ ಪಾತ್ರ
ಬಂಧಿತೆ ಡಾ. ಶಹೀನ್‌ಗೆ, ಜೈಶ್-ಎ-ಮೊಹಮ್ಮದ್ ಸಂಘಟನೆಯು ಭಾರತದಲ್ಲಿ ‘ಜಮಾತ್-ಉಲ್-ಮೊಮಿನೀನ್’ ಎಂಬ ಹೆಸರಿನಲ್ಲಿ ಮಹಿಳಾ ಘಟಕವನ್ನು ಸ್ಥಾಪಿಸುವ ಮತ್ತು ನೇಮಕಾತಿ ಮಾಡುವ ಜವಾಬ್ದಾರಿಯನ್ನು ವಹಿಸಿತ್ತು. ಈ ಮೂಲಕ, ಸುಶಿಕ್ಷಿತ ಮಹಿಳೆಯರನ್ನು ಉಗ್ರ ಸಂಘಟನೆಗೆ ಸೆಳೆಯುವ ಹುನ್ನಾರವಿತ್ತು.
ಅವಧಿಗೆ ಮುನ್ನವೇ ನಡೆದ ಸ್ಫೋಟ
ಡಿಸೆಂಬರ್ 6 ರಂದು ದಾಳಿ ನಡೆಸಲು ಉಗ್ರರು ಸಕಲ ಸಿದ್ಧತೆ ನಡೆಸಿದ್ದರು. ಆದರೆ, ನವೆಂಬರ್ 10 ರಂದು ಫರೀದಾಬಾದ್ ಪೊಲೀಸರು ನಡೆಸಿದ ದಿಢೀರ್ ದಾಳಿಯಲ್ಲಿ, ಉಮರ್ ನಬಿಯ ಸಹಚರ ಡಾ. ಮುಜಮ್ಮಿಲ್ ಶಕೀಲ್ ಮನೆಯಲ್ಲಿ 360 ಕೆ.ಜಿ. ಸೇರಿದಂತೆ ಒಟ್ಟು 2,900 ಕೆ.ಜಿ. ಸ್ಫೋಟಕಗಳು ಪತ್ತೆಯಾದವು. ಈ ಸುದ್ದಿಯಿಂದ ಆತಂಕಗೊಂಡ ಉಮರ್, ತನ್ನ ಯೋಜನೆ ವಿಫಲವಾಗಬಹುದೆಂದು ಹೆದರಿ, ಅವಧಿಗೆ ಮುನ್ನವೇ ಸ್ಫೋಟಕ ತುಂಬಿದ್ದ ಹ್ಯುಂಡೈ ಐ20 ಕಾರನ್ನು ಕೆಂಪುಕೋಟೆ ಬಳಿ ಸ್ಫೋಟಿಸಿದ್ದಾನೆ ಎಂದು ತನಿಖಾ ಸಂಸ್ಥೆಗಳು ಶಂಕಿಸಿವೆ.
ಸ್ಫೋಟದ ದಿನ, ಉಮರ್ ಸುಮಾರು 10 ಗಂಟೆಗಳ ಕಾಲ ಸ್ಫೋಟಕ ತುಂಬಿದ್ದ ಕಾರಿನಲ್ಲಿ ದೆಹಲಿಯ ಹಲವು ವಿವಿಐಪಿ ಪ್ರದೇಶಗಳಲ್ಲಿ ಸಂಚರಿಸಿದ್ದ ದೃಶ್ಯಗಳು ಸುಮಾರು 40 ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ. ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಈ ಪ್ರಕರಣದ ತನಿಖೆ ನಡೆಸುತ್ತಿದ್ದು, ಉಮರ್‌ಗೆ ಕಾರು ಖರೀದಿಸಲು ಸಹಾಯ ಮಾಡಿದ್ದ ಅಮೀರ್ ಎಂಬಾತನನ್ನು ಬಂಧಿಸಿದೆ. ಈ ಪ್ರಕರಣದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಶಂಕೆ ಇದ್ದು, ತನಿಖೆ ಮುಂದುವರಿದಿದೆ.
ಇದನ್ನೂ ಓದಿ: ಡಿಜಿಟಲ್ ಅರೆಸ್ಟ್ ಮಹಾಮೋಸಕ್ಕೆ ಒಳಗಾದ ಮಹಿಳೆ | ತಿಂಗಳುಗಟ್ಟಲೆ ಹಿಂಸಿಸಿ, 31.83 ಕೋಟಿ ರೂ. ದೋಚಿದ ಸೈಬರ್ ವಂಚಕರು!


















