ಬೆಂಗಳೂರು: ದೇಶದಲ್ಲಿ ಟೆಲಿಕಾಂ ಕ್ರಾಂತಿಯಾಗಿದೆ. ಸ್ಮಾರ್ಟ್ ಫೋನ್ ಬಳಕೆದಾರರಿಗೆ ಪ್ರತಿ ದಿನ ಈಗ ಕನಿಷ್ಠ 1-2 ಜಿಬಿ ಇಂಟರ್ ನೆಟ್ ಬೇಕು. ಉಚಿತ ಕರೆಗಳ ಸೌಲಭ್ಯವಿರಬೇಕು. ಇದನ್ನು ಗಮನದಲ್ಲಿಟ್ಟುಕೊಂಡೇ ಟೆಲಿಕಾಂ ಕಂಪನಿಗಳು ಆಗಾಗ ರಿಚಾರ್ಜ್ ಮೊತ್ತವನ್ನು ಏರಿಕೆ ಮಾಡುತ್ತವೆ. ಈಗ ಮತ್ತೊಮ್ಮೆ ದೇಶದ ಟೆಲಿಕಾಂ ಕಂಪನಿಗಳು ರಿಚಾರ್ಜ್ ಮಾಡಿಸುವ ಬೆಲೆಯನ್ನು ಏರಿಕೆ ಮಾಡಲಿವೆ ಎಂದು ತಿಳಿದುಬಂದಿದೆ.
ಹೌದು, ಡಿಸೆಂಬರ್ 1ರಿಂದಲೇ ಟೆಲಿಕಾಂ ಕಂಪನಿಗಳು ರಿಚಾರ್ಜ್ ಶುಲ್ಕವನ್ನು ಏರಿಕೆ ಮಾಡಲಿವೆ ಎಂದು ತಿಳಿದುಬಂದಿದೆ. ಇದರೊಂದಿಗೆ, ಏರ್ ಟೆಲ್, ಜಿಯೋ, ವಿಐ ಮೊಬೈಲ್ ರಿಚಾರ್ಜ್ ಪ್ಲಾನ್ ಗಳ ಮೊತ್ತದಲ್ಲಿ ಶೇ.10ರಷ್ಟು ಏರಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ. ಈ ಮೂರು ಪ್ರಮುಖ ಕಂಪನಿಗಳ ಜತೆಗೆ ಎಲ್ಲ ಕಂಪನಿಗಳು ಕೂಡ ಏರಿಕೆ ಮಾಡಲಿವೆ ಎಂದು ಕೂಡ ವರದಿಯಾಗುತ್ತಿವೆ.
ಕೊನೆಯದಾಗಿ 2024ರಲ್ಲಿ ಟೆಲಿಕಾಂ ಕಂಪನಿಗಳು ಬೆಲೆಯೇರಿಕೆ ಮಾಡಿದ್ದವು. ಆಗ ಟೆಲಿಕಾಂ ಕಂಪನಿಗಳು ಸುಮಾರು ಶೇ.13–15ರಷ್ಟು ಬೆಲೆಯೇರಿಕೆ ಮಾಡಿದ್ದವು. ಈಗ ಮತ್ತೊಮ್ಮೆ ಶೇ.10ರಿಂದ ಶೇ.12ರವರೆಗೆ ಬೆಲೆಯೇರಿಕೆ ಮಾಡಲಿವೆ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ಕೋಟ್ಯಂತರ ಗ್ರಾಹಕರ ಜೇಬಿಗೆ ಹೊರೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ಉದಾಹರಣೆ ಸಮೇತ ಹೇಳುವುದಾದರೆ, 239 ರೂ. ಪ್ಲಾನ್ ಮೊತ್ತವು ಸುಮಾರು ರೂ 265- 270 ರೂ. ಆಗಬಹುದು. 479 ರೂ. ಮೌಲ್ಯದ ಯೋಜನೆಯು 530 ರೂ.ಗೆ ಏರಿಕೆಯಾಗಬಹುದು. ಇನ್ನು ವಾರ್ಷಿಕ ಯೋಜನೆಗಳು ಆಯಾ ಕಂಪನಿಗಳ ಮೇಲೆ ಅವಲಂಬನೆಯಾಗಿದ್ದು, 300-500 ರೂಪಾಯಿ ಆಗಬಹುದು ಎಂದು ಅಂದಾಜಿಸಲಾಗುತ್ತಿದೆ.
ಇದನ್ನೂ ಓದಿ: ಕೇಂದ್ರ ಸರ್ಕಾರದ CFTRI ಸಂಸ್ಥೆಯಲ್ಲಿ 2 ಹುದ್ದೆಗಳ ನೇಮಕಾತಿ : ಮೈಸೂರಿನಲ್ಲಿ ಕೆಲಸ



















