ವಿಜಯನಗರ: ಮನೆಯೊಂದಕ್ಕೆ ನುಗ್ಗಿದ್ದ ನಾಗರಹಾವನ್ನು ಹಿಡಿಯಲು ಯತ್ನಿಸಿದ ಯುವಕ ಸಾವನ್ನಪ್ಪಿರುವ ಘಟನೆ ಹೊಸಪೇಟೆ ನಗರದ 88 ಮುದ್ಲಾಪುರ ಭಾಗದಲ್ಲಿ ನಡೆದಿದೆ.
ನಗರದ ಸಿರಿಸಿನಕಲ್ಲು ನಿವಾಸಿ ಅಬ್ದುಲ್ ರಜಾಕ್ ಯಾನೆ ಅಜ್ಜು (18) ಹಾವು ಕಚ್ಚಿ ಮೃತಪಟ್ಟ ಯುವಕ. ಹಾವು ಹಿಡಿದರೆ ಅಲ್ಪ ಸ್ವಲ್ಪ ಹಣ ಸಿಗುತ್ತದೆ ಎಂಬ ಆಸೆಗೆ ಬಾಲಕ ಹಿಡಿಯಲು ಹೋಗಿದ್ದಾನೆ. ಬಾಲ ಹಿಡಿದು ಮುಂದೆ ಹೆಡೆಯನ್ನು ಹಿಡಿಯುವ ವೇಳೆ ಹಾವು ಕೈಗೆ ಕಚ್ಚಿದೆ. ಹಾವು ಕಚ್ಚಿದ ಬಳಿಕ ಎರಡು ತಾಸು ಮನೆಯಲ್ಲಿ ಯಾರಿಗೂ ಹೇಳಿರಲಿಲ್ಲ. ಆರೋಗ್ಯದಲ್ಲಿ ಏರುಪೇರಾದಾಗ ಕೂಡಲೇ ಹೊಸಪೇಟೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳಕ್ಕೆ, ನಂತರ ಹುಬ್ಬಳ್ಳಿಗೆ ಕಳುಹಿಸಿಕೊಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಮಾಹಿತಿ ಲಭ್ಯವಾಗಿದೆ.
ನ.4ರಂದು ಘಟನೆ ನಡೆದಿದೆ. ಪ್ರಥಮ ಚಿಕಿತ್ಸೆಯಾಗಿ 10 ವಾಯ್ಸ್ ಇಂಜೆಕ್ಷನ್ ಕೊಡಲಾಗಿತ್ತು. ಹೊಸಪೇಟೆಯಲ್ಲಿ ಉತ್ತಮ ಚಿಕಿತ್ಸೆ ಕೊಡಿಸಿ ಯುವಕನ ಜೀವ ಉಳಿಸುವ ಪ್ರಯತ್ನ ನಡೆದಿತ್ತು. ಆದರೆ, ವೈದ್ಯಕೀಯ ಸಲಹೆ ಮೀರಿ ಬಾಲಕನ ಪೋಷಕರೇ ಈ ಆಸ್ಪತ್ರೆಯಿಂದ ಬಿಡುಗಡೆ ಮಾಡಿಕೊಂಡು ಕೊಪ್ಪಳದತ್ತ ತೆರಳಿದ್ದರು. ಅಲ್ಲಿ ಯಾವ ಚಿಕಿತ್ಸೆಯೂ ನೀಡದೆ ಹುಬ್ಬಳ್ಳಿಗೆ ಕಳುಹಿಸಿಕೊಟ್ಟಿದ್ದರು. ಆದರೆ, ಅಲ್ಲಿ ಚಿಕಿತ್ಸೆ ಫಲಿಸದೇ ಬಾಲಕ ಮೃತಪಟ್ಟಿರುವ ಮಾಹಿತಿ ತಿಳಿದು ಬಂದಿರುವುದಾಗಿ ವಿಜಯನಗರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಲ್.ಆರ್.ಶಂಕರ್ ನಾಯ್ಕ ತಿಳಿಸಿದ್ದಾರೆ. ಈ ಸಂಬಂಧ ಚಿತ್ತವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
.ಇದನ್ನೂ ಓದಿ: ದಿಲ್ಲಿ ಸ್ಫೋಟ | ಶಂಕಿತ ಉಗ್ರ ಉಮರ್‌ನ ತಾಯಿ, ಇಬ್ಬರು ಸಹೋದರರು ಸೇರಿ 13 ಮಂದಿ ವಶಕ್ಕೆ!



















