ಥಿಂಫು: ದೆಹಲಿಯ ಕೆಂಪು ಕೋಟೆ ಬಳಿ ನಡೆದ ಕಾರು ಬಾಂಬ್ ಸ್ಫೋಟ ಪ್ರಕರಣದ ಬೆನ್ನಲ್ಲೇ ನಿಗದಿಯಂತೆ ಭೂತಾನ್ ಪ್ರವಾಸ ಕೈಗೊಂಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಭೂತಾನ್‌ನಿಂದಲೇ ಉಗ್ರರಿಗೆ ಖಡಕ್ ಸಂದೇಶ ರವಾನಿಸಿದ್ದಾರೆ. ಸ್ಫೋಟ ಕುರಿತು ಪ್ರತಿಕ್ರಿಯೆ ನೀಡಿರುವ ಅವರು “ಈ ಕೃತ್ಯದ ಹಿಂದಿರುವ ಸಂಚುಕೋರರನ್ನು ಕ್ಷಮಿಸುವುದಿಲ್ಲ. ತಪ್ಪಿತಸ್ಥರೆಲ್ಲರಿಗೂ ಶಿಕ್ಷೆಯಾಗಲಿದೆ,” ಎಂದು ಕಠಿಣ ಎಚ್ಚರಿಕೆ ನೀಡಿದ್ದಾರೆ.
ಪ್ರಧಾನಿ ಮೋದಿ ಅವರು ಭೂತಾನ್ ದೊರೆ ಜಿಗ್ಮೆ ಸಿಂಗ್ಯೆ ವಾಂಗ್‌ಚುಕ್ ಅವರ 70ನೇ ಜನ್ಮದಿನದ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ಎರಡು ದಿನಗಳ ಪ್ರವಾಸಕ್ಕಾಗಿ ಮಂಗಳವಾರ ಥಿಂಪು ತಲುಪಿದ್ದಾರೆ. ಅಲ್ಲಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ದೆಹಲಿಯಲ್ಲಿ ಸೋಮವಾರ ನಡೆದಿರುವ ಸ್ಫೋಟವನ್ನು “ಭೀಕರ” ಎಂದು ಬಣ್ಣಿಸಿ, ಸಂತ್ರಸ್ತ ಕುಟುಂಬಗಳ ನೋವಿನಲ್ಲಿ ತಾವೂ ಭಾಗಿಯಾಗಿರುವುದಾಗಿ ತಿಳಿಸಿದರು. “ಇಡೀ ದೇಶ ಇಂದು ಅವರೊಂದಿಗಿದೆ. ಕಳೆದ ರಾತ್ರಿಯಿಂದಲೂ ನಾನು ತನಿಖಾ ಸಂಸ್ಥೆಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ನಮ್ಮ ಸಂಸ್ಥೆಗಳು ಈ ಪಿತೂರಿಯನ್ನು ಸಂಪೂರ್ಣವಾಗಿ ಭೇದಿಸಲಿವೆ,” ಎಂದು ಅವರು ಭರವಸೆ ನೀಡಿದ್ದಾರೆ.

ಅಲ್ಲಿಯವರೆಗೆ ಹಿಂದಿಯಲ್ಲಿ ಮಾತನಾಡುತ್ತಿದ್ದ ಪ್ರಧಾನಿ, ಬಳಿಕ ಇಂಗ್ಲಿಷ್‌ಗೆ ಬದಲಾಗಿ, “All those responsible will be brought to justice” (ತಪ್ಪಿತಸ್ಥರೆಲ್ಲರಿಗೂ ಶಿಕ್ಷೆಯಾಗಲಿದೆ) ಎಂದು ತಮ್ಮ ಸಂದೇಶವನ್ನು ಜಗತ್ತಿಗೆ ಸ್ಪಷ್ಟಪಡಿಸಿದರು. ಈ ಹಿಂದೆ ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ ಬಳಿಕವೂ ಪ್ರಧಾನಿ ಇದೇ ರೀತಿ ಹಿಂದಿಯಿಂದ ಇಂಗ್ಲಿಷ್‌ಗೆ ಭಾಷೆ ಬದಲಿಸಿ ಮಾತನಾಡಿದ್ದರು. “ಭಾರತವು ಪ್ರತಿಯೊಬ್ಬ ಭಯೋತ್ಪಾದಕನನ್ನು ಮತ್ತು ಅವರ ಬೆಂಬಲಿಗರನ್ನು ಪತ್ತೆಹಚ್ಚಿ, ಶಿಕ್ಷಿಸುತ್ತದೆ,” ಎಂದು ಅವರು ಆಗ ಗುಡುಗಿದ್ದರು.
ಆ ಘಟನೆಯ ಕೆಲವೇ ವಾರಗಳಲ್ಲಿ ಭಾರತವು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಉಗ್ರರ ಶಿಬಿರಗಳನ್ನು ಗುರಿಯಾಗಿಸಿಕೊಂಡು “ಆಪರೇಷನ್ ಸಿಂಧೂರ್” ಎಂಬ ಪ್ರತೀಕಾರದ ಕಾರ್ಯಾಚರಣೆ ನಡೆಸಿತ್ತು. ಸೇನೆ, ನೌಕಾಪಡೆ ಮತ್ತು ವಾಯುಪಡೆಗಳು ಜಂಟಿಯಾಗಿ ಈ ಬಹು-ಡೊಮೇನ್ ದಾಳಿಯನ್ನು ಕಾರ್ಯಗತಗೊಳಿಸಿದ್ದು ವಿಶೇಷವಾಗಿತ್ತು.
ಇದನ್ನೂ ಓದಿ: ದಿಲ್ಲಿ ಸ್ಫೋಟ : ಶಂಕಿತನ ಫೋಟೋ ಬಹಿರಂಗ, ಕೆಂಪುಕೋಟೆ ಬಳಿ 3 ಗಂಟೆ ಕಾರು ನಿಲ್ಲಿಸಿದ್ದ ಉಗ್ರ!



















