ಮುಂಬೈ : ಬಾಲಿವುಡ್ ದಿಗ್ಗಜ ‘ಧರ್ಮೇಂದ್ರ ಅವರು ನಿಧನಹೊಂದಿದ್ದಾರೆ’ ಎಂಬ ಸುಳ್ಳು ಸುದ್ದಿಗೆ ಅವರ ಪತ್ನಿ, ನಟಿ ಹೇಮಾಮಾಲಿನಿ ಮತ್ತು ಕುಟುಂಬ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಇಂತಹ ಸುಳ್ಳು ಸುದ್ದಿ ಹರಡುವುದು ಅತ್ಯಂತ ಅಕ್ಷಮ್ಯ. ಚಿಕಿತ್ಸೆಗೆ ಸ್ಪಂದಿಸುತ್ತಿರುವ ಮತ್ತು ಸುಧಾರಣೆ ಕಾಣುತ್ತಿರುವ ವ್ಯಕ್ತಿಯೊಬ್ಬರ ಮೇಲೆ ಜವಾಬ್ದಾರಿಯುತ ಮಾಧ್ಯಮಗಳು ಸುಳ್ಳು ಸುದ್ದಿ ಹಬ್ಬಿಸುವುದು ಎಷ್ಟು ಸರಿ? ಇದೊಂದು ಬೇಜವಾಬ್ದಾರಿಯುತ ನಡವಳಿಕೆ. ದಯವಿಟ್ಟು ನಮ್ಮ ಕುಟುಂಬದ ಖಾಸಗಿತನಕ್ಕೆ ಗೌರವ ಕೊಡಿ,” ಎಂದು ಅವರು ಟ್ವೀಟ್ ಮಾಡಿದ್ದಾರೆ.

ಇದೇ ವೇಳೆ ಧರ್ಮೇಂದ್ರ ಅವರ ಮಗಳು, ನಟಿ ಈಶಾ ಡಿಯೋಲ್ ಕೂಡ ಇನ್‌ಸ್ಟಾಗ್ರಾಂನಲ್ಲಿ ‘ಪಪ್ಪಾ ಆರೋಗ್ಯ ಸ್ಥಿರವಾಗಿದೆ. ಅವರು ಚೇತರಿಸಿಕೊಂಡಿದ್ದಾರೆ’ ಎಂದು ಹೇಳಿ, ಕುಟುಂಬದ ಗೌಪ್ಯತೆಗೆ ಗೌರವ ನೀಡುವಂತೆ ಮನವಿ ಮಾಡಿದ್ದಾರೆ. ಧರ್ಮೇಂದ್ರ ಅವರ ಪುತ್ರ ಸನ್ನಿ ಡಿಯೋಲ್ ಕೂಡ “ಮಾತಿನ ಮೇಲೆ ವಿಶ್ವಾಸವಿಡಿ, ಸುಳ್ಳು ಸುದ್ದಿ ಹರಡಬೇಡಿ” ಎಂದು ತಿಳಿಸಿದ್ದಾರೆ.
ಧರ್ಮೇಂದ್ರ ಅವರು ನಿಧನರಾಗಿದ್ದಾರೆ ಎಂಬ ಸುದ್ದಿ ಬೆಳಗ್ಗೆಯೇ ಹರಿದಾಡಿದ್ದು, ಈ ಹಿನ್ನೆಲೆಯಲ್ಲಿ ಅವರ ಕುಟುಂಬ ಈ ಸ್ಪಷ್ಟನೆ ನೀಡಿದೆ.
ಧರ್ಮೇಂದ್ರ ಅವರಿಗೆ ಉಸಿರಾಟದ ಸಮಸ್ಯೆ ತೀವ್ರಗೊಂಡ ಹಿನ್ನೆಲೆಯಲ್ಲಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗಾಗಲೇ ಸಲ್ಮಾನ್ ಖಾನ್, ಶಾರುಖ್ ಖಾನ್ ಸೇರಿದಂತೆ ಹಲವು ತಾರೆಯರು ಆಸ್ಪತ್ರೆಗೆ ಭೇಟಿ ನೀಡಿ ಧರ್ಮೇಂದ್ರ ಅವರ ಆರೋಗ್ಯ ವಿಚಾರಿಸಿದ್ದಾರೆ.
ಇದನ್ನೂ ಓದಿ : ದೆಹಲಿ ಸ್ಪೋಟ : ರಾಜ್ಯದಲ್ಲಿ ಬಿಗಿ ಭದ್ರತೆಗೆ ಸಿಎಂ ಸಿದ್ದರಾಮಯ್ಯ ಸೂಚನೆ



















