ಪುಣೆ: ಮಾಲಿವುಡ್- ಬಾಲಿವುಡ್‌ನ ಥ್ರಿಲ್ಲರ್ ಸಿನಿಮಾವೊಂದನ್ನು ವೀಕ್ಷಿಸಿ, ಅದರ ಕಥೆಯಿಂದ ಸ್ಫೂರ್ತಿ ಪಡೆದ ಪುಣೆಯ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನೇ ಕೊಲೆ ಮಾಡಿ, ಆಕೆಯ ಶವವನ್ನು ಫರ್ನೆಸ್‌ನಲ್ಲಿ ಸುಟ್ಟು, ನಂತರ ತಾನೇ ಪೊಲೀಸ್ ಠಾಣೆಗೆ ಅಲೆದಾಡಿ ತನಿಖೆಯ ದಿಕ್ಕು ತಪ್ಪಿಸಲು ಯತ್ನಿಸಿದ ಘಟನೆ ನಡೆದಿದೆ. ಅಷ್ಟೇ ಅಲ್ಲದೆ, ಪತ್ನಿಗೆ ಬೇರೊಬ್ಬನೊಂದಿಗೆ ಸಂಬಂಧವಿತ್ತು ಎಂದು ಬಿಂಬಿಸಲು ಆಕೆಯ ಮೊಬೈಲ್‌ನಿಂದಲೇ ಮತ್ತೊಬ್ಬ ವ್ಯಕ್ತಿಗೆ ‘ಐ ಲವ್ ಯೂ’ ಎಂದು ಸಂದೇಶವನ್ನೂ ಕಳುಹಿಸಿದ್ದಾನೆ.
ಆದರೆ, ಪೊಲೀಸರ ತನಿಖೆಯು ಆತನ ಕುತಂತ್ರವನ್ನು ಬಯಲುಮಾಡಿದೆ. ಅಜಯ್ ದೇವಗನ್ ನಟನೆಯ ‘ದೃಶ್ಯಂ’ ಸಿನಿಮಾವನ್ನು ಕನಿಷ್ಠ ನಾಲ್ಕು ಬಾರಿ ನೋಡಿ ಈ ಕೊಲೆಗೆ ಸಂಚು ರೂಪಿಸಿದ್ದಾಗಿ ಆರೋಪಿ ಬಾಯ್ಬಿಟ್ಟಿದ್ದಾನೆ.
ಆರೋಪಿ ಸಮೀರ್ ಜಾಧವ್ ಮತ್ತು ಖಾಸಗಿ ಶಾಲಾ ಶಿಕ್ಷಕಿಯಾಗಿದ್ದ ಆತನ ಪತ್ನಿ ಅಂಜಲಿ ಸಮೀರ್ ಜಾಧವ್ (38) 2017ರಲ್ಲಿ ವಿವಾಹವಾಗಿದ್ದರು. ಪುಣೆಯ ಶಿವಾನೆ ಪ್ರದೇಶದಲ್ಲಿ ವಾಸವಾಗಿದ್ದ ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ಅಕ್ಟೋಬರ್ 26 ರಂದು, ಸಮೀರ್ ತನ್ನ ಪತ್ನಿಯನ್ನು ತಾನು ಬಾಡಿಗೆಗೆ ಪಡೆದಿದ್ದ ಗೋದಾಮಿಗೆ “ಹೊಸ ಗೋದಾಮು ತೋರಿಸುತ್ತೇನೆ” ಎಂದು ಹೇಳಿ ಕರೆದೊಯ್ದಿದ್ದಾನೆ. ಅಲ್ಲಿ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಅಪರಾಧದ ಯಾವುದೇ ಕುರುಹುಗಳು ಸಿಗದಂತೆ, ಸಾಕ್ಷ್ಯ ನಾಶಮಾಡಲು ಆತ ಆ ಸ್ಥಳದಲ್ಲಿ ಮೊದಲೇ ಕಬ್ಬಿಣದ ಫರ್ನೆಸ್ (ಭಟ್ಟಿ) ವೊಂದನ್ನು ನಿರ್ಮಿಸಿಟ್ಟಿದ್ದ. ಆಕೆಯ ಶವವನ್ನು ಆ ಕುಲುಮೆಯಲ್ಲಿ ಸುಟ್ಟು, ಬೂದಿಯನ್ನು ಸಮೀಪದ ನದಿಯಲ್ಲಿ ವಿಸರ್ಜಿಸಿದ್ದಾನೆ. ಈ ಘಟನೆ ನಡೆದಾಗ ದೀಪಾವಳಿ ರಜೆ ಇದ್ದಿದ್ದರಿಂದ ಮಕ್ಕಳು ಊರಿಗೆ ಹೋಗಿದ್ದರು.
ಪತ್ನಿಯ ಶೀಲದ ಬಗ್ಗೆ ಅನುಮಾನಗೊಂಡು ಆತ ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಆರಂಭದಲ್ಲಿ ಭಾವಿಸಿದ್ದರು. ಆದರೆ, ತನಿಖೆಯಿಂದ ಸ್ವತಃ ಸಮೀರ್‌ಗೆ ಬೇರೊಬ್ಬ ಮಹಿಳೆಯೊಂದಿಗೆ ಸಂಬಂಧವಿದ್ದುದು ಬಹಿರಂಗವಾಯಿತು. ತನ್ನ ಪತ್ನಿಯ ಮೇಲೆ ಅನುಮಾನ ಬರುವಂತೆ ಮಾಡಲು, ಆಕೆಯ ಫೋನ್ ಬಳಸಿ ತನ್ನ ಸ್ನೇಹಿತನೊಬ್ಬನಿಗೆ ‘ಐ ಲವ್ ಯೂ’ ಎಂದು ಸಂದೇಶ ಕಳುಹಿಸಿ, ಅದಕ್ಕೆ ತಾನೇ ಪ್ರತ್ಯುತ್ತರ ನೀಡಿ, ಆಕೆಗೆ ಅನೈತಿಕ ಸಂಬಂಧವಿದ್ದಂತೆ ಸುಳ್ಳು ಸಾಕ್ಷ್ಯ ಸೃಷ್ಟಿಸಿದ್ದ.
ಕೊಲೆಯ ನಂತರ ಸಮೀರ್ ಪೊಲೀಸ್ ಠಾಣೆಗೆ ತೆರಳಿ ಪತ್ನಿ ನಾಪತ್ತೆಯಾಗಿದ್ದಾಳೆಂದು ದೂರು ನೀಡಿದ್ದ. ಅಷ್ಟೇ ಅಲ್ಲದೆ, “ತನ್ನ ಪತ್ನಿಯನ್ನು ಯಾವಾಗ ಪತ್ತೆ ಹಚ್ಚುತ್ತೀರಿ?” ಎಂದು ಪದೇ ಪದೇ ಠಾಣೆಗೆ ಭೇಟಿ ನೀಡಿ ವಿಚಾರಿಸುತ್ತಿದ್ದ. ಆದರೆ, ಆತನ ಈ ನಟನೆಯೇ ಪೊಲೀಸರಲ್ಲಿ ಅನುಮಾನ ಮೂಡಲು ಕಾರಣವಾಯಿತು.
ಆತನ ನಿರಂತರ ವಿಚಾರಣೆ, ಸಿಸಿಟಿವಿ ದೃಶ್ಯಾವಳಿಗಳ ವಿಶ್ಲೇಷಣೆ ಮತ್ತು ತಾಂತ್ರಿಕ ತನಿಖೆಯ ಆಧಾರದ ಮೇಲೆ ಪ್ರಕರಣವನ್ನು ಭೇದಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ಸಂಭಾಜಿ ಕದಂ ತಿಳಿಸಿದ್ದಾರೆ. ಆತನ ಹೇಳಿಕೆಗಳು ಮತ್ತು ತಾಂತ್ರಿಕ ಸಾಕ್ಷ್ಯಗಳ ನಡುವಿನ ವ್ಯತ್ಯಾಸಗಳಿಂದಾಗಿ, ಪೊಲೀಸರು ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ‘ದೃಶ್ಯಂ’ ಸಿನಿಮಾದಿಂದ ಪ್ರೇರಿತನಾಗಿ ಕೊಲೆ ಮಾಡಿರುವುದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ. ವಾರ್ಜೆ ಮಾಲವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆಗಾಗಿ ರಾಜಗಡ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರು | ಪತ್ನಿಯ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಪತಿ



















