ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಸಮೀಪದ ಹರ್ಯಾಣದ ಫರಿದಾಬಾದ್‌ನಲ್ಲಿ ಜಮ್ಮು -ಕಾಶ್ಮೀರ ಪೊಲೀಸರ ತಂಡವು ಬರೋಬ್ಬರಿ 350 ಕೆಜಿ ಸ್ಫೋಟಕ ಹಾಗೂ ಒಂದು ಅಸಾಲ್ಟ್ ರೈಫಲ್ ಅನ್ನು ವಶಪಡಿಸಿಕೊಂಡಿದೆ. ಶ್ರೀನಗರದಲ್ಲಿ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯನ್ನು ಬೆಂಬಲಿಸಿ ಪೋಸ್ಟರ್ ಅಂಟಿಸಿದ ಆರೋಪದ ಮೇಲೆ ಕಾಶ್ಮೀರಿ ವೈದ್ಯರೊಬ್ಬರನ್ನು ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಬಂಧಿಸಿದ ಬೆನ್ನಲ್ಲೇ ಈ ಬೃಹತ್ ಪ್ರಮಾಣದ ಶಸ್ತ್ರಾಸ್ತ್ರ, ಸ್ಫೋಟಕಗಳು ಪತ್ತೆಯಾಗಿದೆ. ಕಳೆದ 15 ದಿನಗಳಲ್ಲಿ ಇಬ್ಬರು ಕಾಶ್ಮೀರಿ ವೈದ್ಯರನ್ನು ಬಂಧಿಸಲಾಗಿದೆ.
ಮೂಲಗಳ ಪ್ರಕಾರ, ಸಹರಾನ್‌ಪುರದಲ್ಲಿ ಬಂಧಿತನಾದ ಡಾ. ಆದಿಲ್ ಅಹ್ಮದ್ ರಾಥರ್ ನೀಡಿದ ಮಾಹಿತಿಯನ್ನು ಆಧರಿಸಿ ಫರಿದಾಬಾದ್‌ನಲ್ಲಿ ಈ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಈ ಸ್ಫೋಟಕಗಳು ಮತ್ತು ಶಸ್ತ್ರಾಸ್ತ್ರಗಳನ್ನು ಮತ್ತೊಬ್ಬ ವೈದ್ಯನಾದ ಮುಜಮ್ಮಿಲ್ ಶಕೀಲ್ ಎಂಬಾತನ ಬಳಿ ಸಂಗ್ರಹಿಸಿಡಲಾಗಿತ್ತು ಎಂದು ತಿಳಿದುಬಂದಿದೆ. ಪುಲ್ವಾಮಾ ಮೂಲದ ಶಕೀಲ್ ಫರಿದಾಬಾದ್‌ನ ಅಲ್-ಫಲಾಹ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು, ಆತನನ್ನೂ ಪೊಲೀಸರು ಬಂಧಿಸಿದ್ದಾರೆ.
ಫರಿದಾಬಾದ್ ಪೊಲೀಸ್ ಕಮಿಷನರ್ ಸತೇಂದರ್ ಕುಮಾರ್ ಗುಪ್ತಾ ಅವರ ಪ್ರಕಾರ, 350 ಕೆಜಿ ಸ್ಫೋಟಕಗಳೊಂದಿಗೆ 20 ಟೈಮರ್‌ಗಳು, ಒಂದು ಪಿಸ್ತೂಲ್, ಮೂರು ಮ್ಯಾಗಜೀನ್‌ಗಳು ಮತ್ತು ಒಂದು ವಾಕಿ-ಟಾಕಿ ಸೆಟ್ ಅನ್ನು ಸಹ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡಿರುವ ಸ್ಫೋಟಕವು ಅಮೋನಿಯಂ ನೈಟ್ರೇಟ್ ಎಂದು ಶಂಕಿಸಲಾಗಿದೆ.
ಅಕ್ಟೋಬರ್ 27 ರಂದು ಶ್ರೀನಗರದಲ್ಲಿ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯನ್ನು ಬೆಂಬಲಿಸುವ ಪೋಸ್ಟರ್‌ಗಳು ಕಾಣಿಸಿಕೊಂಡ ನಂತರ ಈ ಪ್ರಕರಣದ ತನಿಖೆ ಆರಂಭವಾಯಿತು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಡಾ. ರಾಥರ್ ಪೋಸ್ಟರ್ ಅಂಟಿಸುತ್ತಿರುವುದು ಪತ್ತೆಯಾಗಿತ್ತು. ಕಳೆದ ವರ್ಷ ಅಕ್ಟೋಬರ್‌ವರೆಗೆ ಅನಂತನಾಗ್‌ನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ ಆತನನ್ನು, ಕಳೆದ ವಾರ ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಪತ್ತೆಹಚ್ಚಿ ಬಂಧಿಸಲಾಗಿತ್ತು.
ಅನಂತನಾಗ್‌ನ ವೈದ್ಯಕೀಯ ಕಾಲೇಜಿನಲ್ಲಿದ್ದ ರಾಥರ್‌ನ ಲಾಕರ್ ಅನ್ನು ಶೋಧಿಸಿದಾಗ ಪೊಲೀಸರಿಗೆ ಎಕೆ-47 ರೈಫಲ್ ಮತ್ತು ಮದ್ದುಗುಂಡುಗಳು ಸಿಕ್ಕಿದ್ದವು. ಸದ್ಯ ಬಂಧಿತ ವೈದ್ಯರ ವಿಚಾರಣೆ ಮುಂದುವರಿದಿದ್ದು, ರಾಷ್ಟ್ರ ರಾಜಧಾನಿಯ ಸಮೀಪ ಇಷ್ಟೊಂದು ದೊಡ್ಡ ಪ್ರಮಾಣದ ಸ್ಫೋಟಕಗಳನ್ನು ಸಂಗ್ರಹಿಸಿಟ್ಟಿದ್ದರ ಹಿಂದಿನ ಉದ್ದೇಶವೇನು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ, ಇಷ್ಟು ದೊಡ್ಡ ಪ್ರಮಾಣದ ಸ್ಫೋಟಕಗಳು ಯಾವುದೇ ತಪಾಸಣೆಗೆ ಸಿಗದಂತೆ ರಾಜಧಾನಿಯ ಸಮೀಪಕ್ಕೆ ಹೇಗೆ ಸಾಗಿಸಲ್ಪಟ್ಟವು ಎಂಬುದರ ಬಗ್ಗೆಯೂ ತನಿಖೆ ನಡೆಯುತ್ತಿದೆ. ಉಗ್ರ ಸಂಘಟನೆಗಳು ಈಗ ಉನ್ನತ ಶಿಕ್ಷಣ ಪಡೆದ ವೃತ್ತಿಪರರನ್ನು ನೇಮಕ ಮಾಡಿಕೊಳ್ಳುತ್ತಿರುವುದು ಈ ಪ್ರಕರಣದಿಂದ ಮತ್ತೊಮ್ಮೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ;ನಾಳೆ ಬಿಹಾರದಲ್ಲಿ 122 ವಿಧಾನಸಭಾ ಕ್ಷೇತ್ರಗಳಿಗೆ ಅಂತಿಮ ಹಂತದ ಮತದಾನ | ಭಾರತ-ನೇಪಾಳ ಗಡಿ ಬಂದ್



















