ತಿರುವನಂತಪುರಂ: ಕೇರಳದಲ್ಲಿ ವಂದೇ ಭಾರತ್ ರೈಲು ಉದ್ಘಾಟನಾ ಸಮಾರಂಭದಲ್ಲಿ ಶಾಲಾ ವಿದ್ಯಾರ್ಥಿಗಳು ಹಾಡಿದ್ದ ಗೀತೆಯೊಂದು “ಆರ್‌ಎಸ್‌ಎಸ್ ಗೀತೆ” ಎಂಬ ವಿವಾದಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಶಾಲೆಯು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದು, ಹಾಡಿದ್ದು ದೇಶಭಕ್ತಿ ಗೀತೆಯೇ ಹೊರತು, ದೇಶದ ಜಾತ್ಯತೀತತೆಗೆ ಅಥವಾ ರಾಷ್ಟ್ರೀಯ ಏಕತೆಗೆ ಧಕ್ಕೆ ತರುವಂತಹ ಯಾವುದೇ ಅಂಶ ಅದರಲ್ಲಿಲ್ಲ ಎಂದು ಸ್ಪಷ್ಟಪಡಿಸಿದೆ.
ಶಾಲೆಯ ಪ್ರಾಂಶುಪಾಲರಾದ ಡಿಂಟೊ ಕೆ.ಪಿ. ಅವರು ಪ್ರಧಾನಿಗೆ ಬರೆದ ಪತ್ರದಲ್ಲಿ, “ಪರಮಪವಿತ್ರಮಿತಮೀ ಮಣ್ಣಿಲ್ ಭಾರತಾಂಬೆಯೇ ಪೂಜಿಕ್ಕಂ”(Paramapavitramathamie Mannil Bharathambaye Poojikkan) ಎಂಬ ಮಲಯಾಳಂ ದೇಶಭಕ್ತಿ ಗೀತೆಯನ್ನು ವಿದ್ಯಾರ್ಥಿಗಳು ಹಾಡಿದ್ದಾರೆ. “ನಮ್ಮ ಮಕ್ಕಳು ಮಾತೃಭೂಮಿಯನ್ನು ಶ್ಲಾಘಿಸುವ ದೇಶಭಕ್ತಿ ಗೀತೆಯನ್ನು ಹಾಡಬಾರದೇ? ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ಇಂತಹ ಕ್ರಮಗಳು ಯುವ ಮನಸ್ಸುಗಳಲ್ಲಿ ರಾಷ್ಟ್ರೀಯತೆಯ ಸ್ಫೂರ್ತಿಯನ್ನು ಕುಗ್ಗಿಸುತ್ತವೆ ಎಂದು ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ಎರಡು ಮಲಯಾಳಂ ಸುದ್ದಿ ವಾಹಿನಿಗಳಾದ ’24 ನ್ಯೂಸ್’ ಮತ್ತು ‘ಮೀಡಿಯಾ 1’ ಈ ಹಾಡನ್ನು ಆರ್‌ಎಸ್‌ಎಸ್‌ನೊಂದಿಗೆ ತಳುಕು ಹಾಕಿ ಟೀಕಿಸಿದ ನಂತರ, ದಕ್ಷಿಣ ರೈಲ್ವೆಯು ತನ್ನ ಅಧಿಕೃತ ‘ಎಕ್ಸ್’ ಖಾತೆಯಿಂದ ಈ ಪೋಸ್ಟ್ ಅನ್ನು ಅಳಿಸಿಹಾಕಿದೆ ಎಂದು ಪ್ರಾಂಶುಪಾಲರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಘಟನೆಯಿಂದ ವಿದ್ಯಾರ್ಥಿಗಳು, ಸಿಬ್ಬಂದಿ ಮತ್ತು ಪೋಷಕರಿಗೆ ತೀವ್ರ ದುಃಖವಾಗಿದೆ ಎಂದು ಅವರು ಹೇಳಿದ್ದಾರೆ.
ನಂತರ, ದಕ್ಷಿಣ ರೈಲ್ವೆಯು ಸಂಪಾದಿತ ಟ್ವೀಟ್‌ನಲ್ಲಿ ವಿದ್ಯಾರ್ಥಿಗಳು ಹಾಡುತ್ತಿರುವ ವೀಡಿಯೊವನ್ನು ಮರು ಪೋಸ್ಟ್ ಮಾಡಿ, “ಎರ್ನಾಕುಲಂ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಉದ್ಘಾಟನಾ ಸಂಚಾರದ ಸಂದರ್ಭದಲ್ಲಿ ಸರಸ್ವತಿ ವಿದ್ಯಾಲಯದ ವಿದ್ಯಾರ್ಥಿಗಳು ತಮ್ಮ ಶಾಲಾ ಗೀತೆಯನ್ನು ಸುಂದರವಾಗಿ ಪ್ರದರ್ಶಿಸಿದರು” ಎಂದು ಸ್ಪಷ್ಟನೆ ನೀಡಿದೆ.
ರಾಜಕೀಯ ವಿವಾದ
ಈ ಘಟನೆಯು ಕೇರಳದಲ್ಲಿ ರಾಜಕೀಯ ಬಿರುಗಾಳಿಯನ್ನೇ ಎಬ್ಬಿಸಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಕ್ರಮವನ್ನು “ಅತ್ಯಂತ ಖಂಡನೀಯ” ಮತ್ತು “ಸಾಂವಿಧಾನಿಕ ತತ್ವಗಳ ಸ್ಪಷ್ಟ ಉಲ್ಲಂಘನೆ” ಎಂದು ಕರೆದಿದ್ದಾರೆ. ಸರ್ಕಾರಿ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ಗೀತೆಯನ್ನು ಸೇರಿಸಿರುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಅವರು ರೈಲ್ವೆ ಸಚಿವರಿಗೆ ಪತ್ರ ಬರೆದು, ಶಾಲಾ ವಿದ್ಯಾರ್ಥಿಗಳಿಂದ ಆರ್‌ಎಸ್‌ಎಸ್ ಗೀತೆಯನ್ನು ಹಾಡಿಸಿದ್ದೇಕೆ ಎಂದು ವಿವರಣೆ ಕೇಳಿದ್ದಾರೆ. “ಸಾರ್ವಜನಿಕ ಕಾರ್ಯಕ್ರಮವನ್ನು ಆರ್‌ಎಸ್‌ಎಸ್ ಕಾರ್ಯಕ್ರಮವನ್ನಾಗಿ ಪರಿವರ್ತಿಸಲಾಗಿದೆ. ಇದು ಭಾರತೀಯ ರೈಲ್ವೆಯ ಸಂಪೂರ್ಣ ದುರ್ಬಳಕೆಯಾಗಿದೆ” ಎಂದು ಅವರು ಆರೋಪಿಸಿದ್ದಾರೆ. ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಕೂಡಾ ಇದೊಂದು “ಕಾನೂನುಬಾಹಿರ ಮತ್ತು ಪ್ರಜಾಪ್ರಭುತ್ವ ವಿರೋಧಿ” ಕೃತ್ಯ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ: ‘ಆಪರೇಷನ್ ಸಿಂದೂರ’ ಬಳಿಕ ಪಾಕಿಸ್ತಾನದಿಂದ ಸಂವಿಧಾನಕ್ಕೆ ತಿದ್ದುಪಡಿ : ಸೇನಾ ಮುಖ್ಯಸ್ಥರಿಗೆ ಪರಮಾಧಿಕಾರ



















