ಬೆಂಗಳೂರು: ಆನ್ ಲೈನ್ ವಂಚನೆ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಜನ ಮೋಸ ಹೋಗುತ್ತಿದ್ದಾರೆ. ಜನ ಎಷ್ಟೇ ಮುಂಜಾಗ್ರತಾ ಕ್ರಮ ತೆಗೆದುಕೊಂಡರೂ ವಂಚಕರು ಹತ್ತಾರು ಕಳ್ಳ ಮಾರ್ಗಗಳ ಮೂಲಕ ಜನರನ್ನು ವಂಚನೆ ಮಾಡುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರ ವೀಡಿಯೋ ಬಳಸಿಕೊಂಡು, ವಂಚಕರು ಜನರಿಂದ ಹಣ ವಂಚಿಸಲು ಪ್ಲಾನ್ ರೂಪಿಸಿದ್ದಾರೆ. ಇದರ ಬಗ್ಗೆ ಕೇಂದ್ರ ಸರ್ಕಾರವೇ ಈಗ ಸ್ಪಷ್ಟನೆ ನೀಡಿದ್ದು, ಇಂತಹ ವೀಡಿಯೋಗಳನ್ನು ನಂಬಬೇಡಿ ಎಂದು ಮನವಿ ಮಾಡಿದೆ.

ಹೌದು, ಕ್ವಾಂಟಮ್ಎಐ ವೇದಿಕೆ ಮೂಲಕ ಜನರು ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ. ಕ್ವಾಂಟಮ್ ಎಐನಲ್ಲಿಹೂಡಿಕೆ ಮಾಡಿ, ಹೆಚ್ಚು ಲಾಭ ಗಳಿಸಿ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಅವರೇ ಹೇಳಿರುವ ವೀಡಿಯೋ ವೈರಲ್ ಆಗಿದೆ. ನೀವು ತಿಂಗಳಿಗೆ 21 ಸಾವಿರ ರೂ. ಹೂಡಿಕೆ ಮಾಡಿದರೆ, ಪ್ರತಿ ತಿಂಗಳು ನಿಮಗೆ 3.5 ಲಕ್ಷ ರೂಪಾಯಿ ಲಾಭ ಸಿಗುತ್ತದೆ ಎಂಬುದಾಗಿ ಮಾಹಿತಿ ಪಸರಿಸಲಾಗಿದೆ. ಆದರೆ, ಇದು ನಕಲಿ ಎಂದು ಕೇಂದ್ರ ಸರ್ಕಾರವೇ ತಿಳಿಸಿದೆ.
ಕ್ವಾಂಟಮ್ ಎಐ ಇನ್ವೆಸ್ಟ್ ಮೆಂಟ್ ಪ್ಲಾಟ್ ಫಾರ್ಮ್ ಎಂಬ ವೇದಿಕೆ ಮೂಲಕ ಜನರಿಗೆ ವಂಚನೆ ಮಾಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಯಾವುದೇ ಹೂಡಿಕೆ ವೇದಿಕೆಯ ಬಗ್ಗೆ ಪ್ರಚಾರ ಮಾಡಿಲ್ಲ. ಯಾರೂ ಕೂಡ ಇಂತಹ ವಂಚನೆಯ ಜಾಲವನ್ನು ನಂಬಬಾರದು ಎಂದು ಪಿಐಬಿ ಫ್ಯಾಕ್ಟ್ ಚೆಕ್ ಘಟಕವು ಸೋಷಿಯಲ್ ಮೀಡಿಯಾದಲ್ಲಿಸ್ಪಷ್ಟನೆ ನೀಡಿದೆ.
ಎಐ ಜನರೇಟ್ ಮಾಡಿರುವ ವೀಡಿಯೋಗಳನ್ನು ಬಳಸಿಕೊಂಡು ಜನರಿಗೆ ವಂಚಿಸಲಾಗುತ್ತಿದೆ. ಇಂತಹ ಅನಾಮಧೇಯ ವೀಡಿಯೋಗಳು, ಮೊಬೈಲ್ ಗಳಿಗೆ ಕಳುಹಿಸುವ ಲಿಂಕ್ ಗಳ ಮೇಲೆ ಸಾರ್ವಜನಿಕರು ಕ್ಲಿಕ್ ಮಾಡಬಾರದು. ಇಂತಹ ಯಾವುದೇ ಅನುಮಾನಾಸ್ಪದ ಕರೆಗಳು ಬಂದರೆ, ಕೂಡಲೇ ಸೈಬರ್ ಕ್ರೈಮ್ ವೆಬ್ ಸೈಟ್ ನಲ್ಲಿ ದೂರು ದಾಖಲಿಸಬೇಕು ಎಂದು ಕೂಡ ಪಿಐಬಿ ಮನವಿ ಮಾಡಿದೆ.
ಇದನ್ನೂ ಓದಿ: ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಂದ ಮೂರು ಮಕ್ಕಳ ಪಾಪಿ ತಾಯಿ



















