ಹೈದರಾಬಾದ್: ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿ ಇರುವೆಗಳ ಬಗೆಗಿನ ತೀವ್ರ ಭಯದಿಂದ (ಮೈರ್ಮೆಕೋಫೋಬಿಯಾ) 25 ವರ್ಷದ ಯುವತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ವಿಚಿತ್ರ ಘಟನೆ ವರದಿಯಾಗಿದೆ. ಮೃತ ಯುವತಿ 2022ರಲ್ಲಿ ವಿವಾಹವಾಗಿದ್ದು, ಅವರಿಗೆ ಮೂರು ವರ್ಷದ ಮಗಳಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆಗೆ ಬಾಲ್ಯದಿಂದಲೂ ಇರುವೆಗಳ ಬಗ್ಗೆ ತೀವ್ರ ಭಯವಿತ್ತು ಎಂದು ಸಂಬಂಧಿಕರು ಮತ್ತು ನೆರೆಹೊರೆಯವರು ಪೊಲೀಸರಿಗೆ ತಿಳಿಸಿದ್ದಾರೆ. ಈ ಭಯ ಎಷ್ಟರಮಟ್ಟಿಗೆ ಇತ್ತೆಂದರೆ, ಅವರು ತಮ್ಮ ಹುಟ್ಟೂರಾದ ಮಂಚೇರಿಯಾಲ್‌ನ ಆಸ್ಪತ್ರೆಯಲ್ಲಿ ಈ ಹಿಂದೆ ಕೌನ್ಸೆಲಿಂಗ್ ಕೂಡ ಪಡೆದಿದ್ದರು. ಮದುವೆಯ ನಂತರವೂ ಈ ಫೋಬಿಯಾ ಅವರ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುತ್ತಲೇ ಇತ್ತು.
ಘಟನೆ ನಡೆದ ದಿನ, ಮನೆಯನ್ನು ಸ್ವಚ್ಛಗೊಳಿಸಿ ಬರುವುದಾಗಿ ಹೇಳಿ, ಮಗಳನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟಿದ್ದರು. ಬೆಳಿಗ್ಗೆ ಕೆಲಸಕ್ಕೆ ಹೋಗಿದ್ದ ಪತಿ ಸಂಜೆ ಮನೆಗೆ ಬಂದಾಗ, ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ನೆರೆಹೊರೆಯವರ ಸಹಾಯದಿಂದ ಬಾಗಿಲು ಒಡೆದು ನೋಡಿದಾಗ, ಅವರು ಸೀರೆಯಿಂದ ಫ್ಯಾನ್‌ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಡೆತ್ ನೋಟ್‌ನಲ್ಲಿ ಇರುವೆಗಳ ಭಯದ ಉಲ್ಲೇಖ
ಮನೆಯಲ್ಲಿ ಸಿಕ್ಕ ಡೆತ್ ನೋಟ್‌ನಲ್ಲಿ ಆಕೆ ತನ್ನ ಭಯದ ಬಗ್ಗೆ ನೇರವಾಗಿ ಉಲ್ಲೇಖಿಸಿದ್ದಾಳೆ. “ಕ್ಷಮಿಸು, ಇರುವೆಗಳ ಜೊತೆ ಬದುಕಲು ನನ್ನಿಂದ ಸಾಧ್ಯವಾಗುತ್ತಿಲ್ಲ. ಮಗಳನ್ನು ಚೆನ್ನಾಗಿ ನೋಡಿಕೋ,” ಎಂದು ಪತಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾಳೆ. ಇದರೊಂದಿಗೆ, ಕೆಲವು ಧಾರ್ಮಿಕ ಹರಕೆಗಳ ಬಗ್ಗೆಯೂ ಪತ್ರದಲ್ಲಿ ಬರೆದಿದ್ದು, ತೀವ್ರ ಒತ್ತಡದಲ್ಲಿ ಈ ನಿರ್ಧಾರ ತೆಗೆದುಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಮನೆ ಸ್ವಚ್ಛಗೊಳಿಸುವಾಗ ಇರುವೆಗಳನ್ನು ಕಂಡು ಭಯಭೀತಗೊಂಡು, ಈ ನಿರ್ಧಾರ ಕೈಗೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಅಮೀನ್‌ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಏನಿದು ಮೈರ್ಮೆಕೋಫೋಬಿಯಾ?
ಮೈರ್ಮೆಕೋಫೋಬಿಯಾ ಎನ್ನುವುದು ಇರುವೆಗಳ ಬಗ್ಗೆ ಇರುವ ನಿರ್ದಿಷ್ಟ ಫೋಬಿಯಾ ಆಗಿದೆ. ಈ ಸ್ಥಿತಿಯಲ್ಲಿರುವವರು ಒಂದೇ ಒಂದು ಇರುವೆಯನ್ನು ನೋಡಿದರೂ ತೀವ್ರ ಆತಂಕ ಅಥವಾ ಭಯಕ್ಕೆ ಒಳಗಾಗಬಹುದು. ಬಾಲ್ಯದ ಅಹಿತಕರ ಘಟನೆಗಳು, ಕೀಟಗಳ ಬಗ್ಗೆ ಪದೇ ಪದೇ ಎಚ್ಚರಿಕೆ ನೀಡುವುದು ಅಥವಾ ಇರುವೆಗಳು ದೊಡ್ಡ ಗುಂಪುಗಳಲ್ಲಿ ಚಲಿಸುವುದರಿಂದ ಈ ಭಯ ಬೆಳೆಯಬಹುದು. ಇದು ಕೆಲವರಲ್ಲಿ ದೈನಂದಿನ ಜೀವನ ಮತ್ತು ಭಾವನಾತ್ಮಕ ಸ್ಥಿರತೆಯ ಮೇಲೆ ತೀವ್ರ ಪರಿಣಾಮ ಬೀರಬಹುದು.
ಇದನ್ನೂ ಓದಿ: ಉಡುಪಿ | ಶಾಂಭವಿ ನದಿಯಲ್ಲಿ ಉದ್ಯಮಿ, ಕಂಬಳ ಸಂಘಟಕ ಅಭಿಷೇಕ್ ಆಳ್ವ ಮೃತದೇಹ ಪತ್ತೆ



















