ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ‘ವೀವ್ಸ್’ ಮತ್ತು ‘ಲೈಕ್ಸ್’ ಗಳಿಸುವ ಗೀಳು ಅಪಾಯಕಾರಿ ಮಟ್ಟ ತಲುಪುತ್ತಿದೆ ಎಂಬುದಕ್ಕೆ ಈ ಘಟನೆಯೇ ತಾಜಾ ಉದಾಹರಣೆ. ತನ್ನ ಚಿಕ್ಕ ಮಗ ಆಕಸ್ಮಿಕವಾಗಿ ಬಾತ್‌ರೂಮ್‌ನಲ್ಲಿ ಲಾಕ್ ಆಗಿ ಭಯದಿಂದ ಅಳುತ್ತಿದ್ದರೂ, ಆತನನ್ನು ರಕ್ಷಿಸುವುದನ್ನು ಬಿಟ್ಟು ತಾಯಿಯೊಬ್ಬಳು ಆ ಕ್ಷಣವನ್ನು ವಿಡಿಯೋ ಮಾಡಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾಳೆ. ಈ ಅಮಾನವೀಯ ಕೃತ್ಯಕ್ಕೆ ನೆಟ್ಟಿಗರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.
ವಿಡಿಯೋದಲ್ಲಿ ಏನಿದೆ?
ಬ್ಲಾಗರ್ ಮಮತಾ ಬ್ರಿಷ್ಟ್ ಎಂಬ ಮಹಿಳೆ ಹಂಚಿಕೊಂಡಿರುವ ಈ ವಿಡಿಯೋದಲ್ಲಿ, ಆಕೆಯ ಮಗು ಬಾತ್‌ರೂಮ್‌ನ ಒಳಗಿನಿಂದ ಚಿಲಕ ಹಾಕಿಕೊಂಡು ಅಳುತ್ತಿರುವುದು ಸ್ಪಷ್ಟವಾಗಿ ಕೇಳಿಸುತ್ತದೆ. “ನನ್ನ ಮಗ ಆಕಸ್ಮಿಕವಾಗಿ ಬಾತ್‌ರೂಮ್‌ನಲ್ಲಿ ಲಾಕ್ ಆಗಿ ನಿರಂತರವಾಗಿ ಅಳುತ್ತಿದ್ದಾನೆ. ಅವನು ತುಂಬಾ ಭಯಪಟ್ಟಿದ್ದ, ನನಗೂ ಭಯವಾಗಿತ್ತು. ಏನು ಮಾಡಬೇಕೆಂದು ತೋಚಲಿಲ್ಲ,” ಎಂದು ಮಮತಾ ವಿಡಿಯೋದಲ್ಲಿ ಹೇಳಿದ್ದಾರೆ. ನಂತರ, ನೆರೆಮನೆಯವರ ಸಹಾಯದಿಂದ ಟೆರೇಸ್ ಮೂಲಕ ಏಣಿ ಹತ್ತಿ, ಕಿಟಕಿಯಿಂದ ರಾಡ್ ಬಳಸಿ ಬಾಗಿಲು ತೆರೆದು ಮಗುವನ್ನು ರಕ್ಷಿಸುವ ದೃಶ್ಯವೂ ವಿಡಿಯೋದಲ್ಲಿದೆ.
ಜಾಗೃತಿಗಾಗಿ ಮಾಡಿದ ವಿಡಿಯೋವೇ?
“ಇದೇ ರೀತಿಯ ಘಟನೆಗಳ ಬಗ್ಗೆ ಇತರ ತಾಯಂದಿರು ಜಾಗರೂಕರಾಗಿರಲಿ ಎಂಬ ಉದ್ದೇಶದಿಂದ ಈ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದೇನೆ,” ಎಂದು ಮಮತಾ ತಮ್ಮ ಪೋಸ್ಟ್‌ನ ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ. ಆದರೆ, ಜಾಗೃತಿ ಮೂಡಿಸುವ ಅವರ ಈ ಪ್ರಯತ್ನವು ಸಂಪೂರ್ಣವಾಗಿ ತಿರುಗುಬಾಣವಾಗಿದೆ. ಮಗುವಿನ ಸುರಕ್ಷತೆಗಿಂತ ಕಂಟೆಂಟ್ ರಚಿಸುವುದಕ್ಕೆ ಆದ್ಯತೆ ನೀಡಿದ್ದಕ್ಕಾಗಿ ನೆಟ್ಟಿಗರು ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ನೆಟ್ಟಿಗರಿಂದ ಆಕ್ರೋಶದ ಮಹಾಪೂರ
ಈ ವಿಡಿಯೋ ನೋಡಿದ ಬಳಕೆದಾರರು ತೀವ್ರವಾಗಿ ಕಿಡಿಕಾರಿದ್ದಾರೆ. “ಮಗುವಿಗೆ ಸಹಾಯ ಮಾಡುವುದನ್ನು ಬಿಟ್ಟು ರೀಲ್ಸ್ ಮಾಡುವುದರಲ್ಲಿ ನಿರತರಾಗಿದ್ದೀರಿ. ಎಷ್ಟು ಅಸಹ್ಯಕರ,” ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. “ಸ್ವಲ್ಪವಾದರೂ ನಾಚಿಕೆ ಇರಲಿ! ಕೇವಲ ವಿಡಿಯೋ ವೀವ್ಸ್‌ಗಾಗಿ ನಿಮ್ಮ ಮಗುವನ್ನೇ ಬಾತ್‌ರೂಮ್‌ನಲ್ಲಿ ಕೂಡಿ ಹಾಕಿದ್ದೀರಾ? ಇಷ್ಟು ಕೀಳು ಮಟ್ಟಕ್ಕೆ ಇಳಿಯಬೇಡಿ,” ಎಂದು ಮತ್ತೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆಯು ಸಾಮಾಜಿಕ ಮಾಧ್ಯಮದ ಎಂಗೇಜ್‌ಮೆಂಟ್‌ಗಾಗಿ ಪೋಷಕರು ಮಕ್ಕಳ ಸಂಕಷ್ಟದ ಕ್ಷಣಗಳನ್ನು ಚಿತ್ರೀಕರಿಸುವ ನೈತಿಕತೆಯ ಬಗ್ಗೆ ಮತ್ತೊಮ್ಮೆ ಚರ್ಚೆಯನ್ನು ಹುಟ್ಟುಹಾಕಿದೆ.
ಇದನ್ನೂ ಓದಿ: ನಡು ರಸ್ತೆಯಲ್ಲೇ ಹೊತ್ತಿ ಉರಿದ ವೋಕ್ಸ್ ವ್ಯಾಗನ್ ಕಾರು



















