ನವದೆಹಲಿ: ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ಕೆಎಲ್ ರಾಹುಲ್, ಇತ್ತೀಚೆಗೆ ಪಾಡ್‌ಕಾಸ್ಟ್ ಒಂದರಲ್ಲಿ ನೀಡಿದ ತಮಾಷೆಯ ಹೇಳಿಕೆಯೊಂದು ಇದೀಗ ಐಪಿಎಲ್ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಐಪಿಎಲ್ 2026ರ ಮಿನಿ ಹರಾಜಿಗೂ ಮುನ್ನ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ತೊರೆದು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಸೇರಬಹುದು ಎಂಬ ವದಂತಿಗಳಿಗೆ ಈ ಹೇಳಿಕೆ ರೆಕ್ಕೆಪುಕ್ಕ ನೀಡಿದೆ.
ವದಂತಿಗೆ ಕಾರಣವಾದ ಹೇಳಿಕೆ
ಪಾಡ್‌ಕಾಸ್ಟ್‌ನಲ್ಲಿ ತಮ್ಮ ಐಪಿಎಲ್ ಪಯಣದ ಬಗ್ಗೆ ಮಾತನಾಡಿದ ರಾಹುಲ್‌ಗೆ, ಆಗಾಗ ತಂಡಗಳನ್ನು ಬದಲಾಯಿಸುವ ಬಗ್ಗೆ ಪ್ರಶ್ನೆ ಕೇಳಲಾಯಿತು. ಆಸ್ಟ್ರೇಲಿಯಾದ ಮಾಜಿ ನಾಯಕ ಆ್ಯರನ್ ಫಿಂಚ್ 9 ವಿವಿಧ ಐಪಿಎಲ್ ತಂಡಗಳಿಗೆ ಆಡಿದ್ದನ್ನು ಹೋಲಿಸಿದಾಗ, ರಾಹುಲ್ ನಗುತ್ತಲೇ “ನಾನೂ ಕೂಡ ಹೆಚ್ಚು ದೂರ ಉಳಿದಿಲ್ಲ,” ಎಂದು ತಮಾಷೆಯಾಗಿ ಉತ್ತರಿಸಿದರು. ಈ ಒಂದು ಮಾತೇ ಇದೀಗ ಅವರ ತಂಡ ಬದಲಾವಣೆಯ ಚರ್ಚೆಯನ್ನು ಹುಟ್ಟುಹಾಕಿದೆ.
ಡೆಲ್ಲಿಯಲ್ಲಿ ಉತ್ತಮ ಪ್ರದರ್ಶನ
ಐಪಿಎಲ್ 2025ರ ಹರಾಜಿಗೂ ಮುನ್ನ 14 ಕೋಟಿ ರೂ. ಮೊತ್ತಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಸೇರಿದ್ದ ರಾಹುಲ್, ಕಳೆದ ಋತುವಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. 13 ಪಂದ್ಯಗಳಿಂದ ಒಂದು ಶತಕ ಮತ್ತು ಮೂರು ಅರ್ಧಶತಕಗಳ ನೆರವಿನಿಂದ 539 ರನ್ ಗಳಿಸಿ, ತಮ್ಮ ಸ್ಟ್ರೈಕ್ ರೇಟ್ ಬಗ್ಗೆ ಟೀಕಿಸುತ್ತಿದ್ದವರ ಬಾಯಿ ಮುಚ್ಚಿಸಿದ್ದರು. ಅವರ ಪ್ರದರ್ಶನದಿಂದಾಗಿ ಡೆಲ್ಲಿ ತಂಡವು ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿತ್ತು. ಹೀಗಿದ್ದರೂ, ರಾಹುಲ್ ಹೇಳಿಕೆ ಅಭಿಮಾನಿಗಳಲ್ಲಿ ಗೊಂದಲ ಮೂಡಿಸಿದೆ.
ಕೆಕೆಆರ್ ತಂಡದ ಆಸಕ್ತಿ?
ವರದಿಗಳ ಪ್ರಕಾರ, ಮೂರು ಬಾರಿಯ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್), ರಾಹುಲ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಆಸಕ್ತಿ ಹೊಂದಿದೆ. ಅಜಿಂಕ್ಯ ರಹಾನೆ ನಾಯಕತ್ವದಲ್ಲಿ 2025ರಲ್ಲಿ ನಿರಾಸಾದಾಯಕ ಪ್ರದರ್ಶನ ನೀಡಿದ್ದ ಕೆಕೆಆರ್, ಅನುಭವಿ ನಾಯಕನ ಹುಡುಕಾಟದಲ್ಲಿದೆ. ಕೆಕೆಆರ್ ಸಹಾಯಕ ಕೋಚ್ ಅಭಿಷೇಕ್ ನಾಯರ್ ಅವರೊಂದಿಗೆ ರಾಹುಲ್ ಉತ್ತಮ ಬಾಂಧವ್ಯ ಹೊಂದಿರುವುದು ಈ ವದಂತಿಗೆ ಮತ್ತಷ್ಟು ಬಲ ನೀಡಿದೆ.
ಆದಾಗ್ಯೂ, ಈ ಟ್ರೇಡ್ ಅಷ್ಟು ಸುಲಭವಲ್ಲ. ಡೆಲ್ಲಿ ಕ್ಯಾಪಿಟಲ್ಸ್ ತಮ್ಮ ನಾಯಕನನ್ನು ಸುಲಭವಾಗಿ ಬಿಟ್ಟುಕೊಡುವ ಸಾಧ್ಯತೆ ಇಲ್ಲ. ಮತ್ತೊಂದೆಡೆ, ರಾಹುಲ್‌ಗೆ ಸಮನಾದ ಮೌಲ್ಯದ ಆಟಗಾರ ಕೆಕೆಆರ್ ಬಳಿ ಇಲ್ಲದಿರುವುದರಿಂದ ಈ ಒಪ್ಪಂದ ನಡೆಯುವುದು ಕಷ್ಟ ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
ಕಳೆದ ಎಂಟು ಐಪಿಎಲ್ ಋತುಗಳಲ್ಲಿ ಏಳು ಬಾರಿ 500ಕ್ಕೂ ಹೆಚ್ಚು ರನ್ ಗಳಿಸಿರುವ ರಾಹುಲ್, ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿ ರಾಷ್ಟ್ರೀಯ ತಂಡದ ಜವಾಬ್ದಾರಿಯಲ್ಲಿದ್ದಾರೆ. ಆದರೆ, ಅವರ ಒಂದು ತಮಾಷೆಯ ಮಾತು ಐಪಿಎಲ್ ಜಗತ್ತಿನಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸಬಲ್ಲದು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಇದನ್ನೂ ಓದಿ : ಗಾಯಾಳು ಶ್ರೇಯಸ್ ಅಯ್ಯರ್‌ಗಾಗಿ ಸೂರ್ಯಕುಮಾರ್ ಯಾದವ್ ತಾಯಿ ವಿಶೇಷ ಪ್ರಾರ್ಥನೆ ; ವೈರಲ್ ಆಯ್ತು ವಿಡಿಯೋ



















