ಕರ್ನೂಲ್ : ಆಂಧ್ರಪ್ರದೇಶದ ಕರ್ನೂಲ್ ಬಸ್ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಮತ್ತು ಗಾಯಾಳುಗಳಿಗೆ ತಲಾ 2 ಲಕ್ಷ ರೂ. ಪರಿಹಾರ ನೀಡುವುದಾಗಿ ಆಂಧ್ರಪ್ರದೇಶ ಸಾರಿಗೆ ಸಚಿವ ರಾಮ್ ಪ್ರಸಾದ್ ರೆಡ್ಡಿ ಘೋಷಿಸಿದ್ದಾರೆ. ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ ಇಬ್ಬರು ಮಕ್ಕಳು ಸೇರಿದಂತೆ 20 ಪ್ರಯಾಣಿಕರು ಸಾವನ್ನಪ್ಪಿದ್ದು, 12 ಜನರು ಗಾಯಗೊಂಡಿದ್ದಾರೆ.
ಏನಿದು ಅವಘಡ? ಆಂಧ್ರದ ಕರ್ನೂಲ್ ಬಳಿಯ ಚಿನ್ನಟೇಕೂರು ಬಳಿ ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ವೇಳೆ ಇಂದು ನಸುಕಿನ ಜಾವ ಅವಘಡ ಸಂಭವಸಿದೆ. ದುರಂತದಲ್ಲಿ 40 ಮಂದಿ ಪ್ರಯಾಣಿಕರಲ್ಲಿ 20 ಮಂದಿ ಜೀವಂತವಾಗಿ ಸುಟ್ಟು ಹೋಗಿದ್ದಾರೆ. ಗಾಯಳು ಪ್ರಯಾಣಿಕರನ್ನು ಕರ್ನೂಲ್ ಸರ್ಕಾರಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಪ್ರಯಾಣಿಕರು ಹೈದರಾಬಾದ್ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ
ಇನ್ನು, ಮಾಹಿತಿ ತಿಳಿದ ಕೂಡಲೇ ಅಗ್ನಿಶಾಮಕ ದಳ ಮತ್ತು ಪೊಲೀಸ್ ತಂಡಗಳು ಸ್ಥಳಕ್ಕೆ ಆಗಮಿಸಿ ರಕ್ಷಣಾ ತಂಡಗಳು ಸ್ಥಳಕ್ಕೆ ಬರುವಷ್ಟರಲ್ಲಿ ಬಸ್ಸು ಬಹುತೇಕ ಸುಟ್ಟುಹೋಗಿತ್ತು. ಈಗ ಅಧಿಕಾರಿಗಳು ಮೃತ ವ್ಯಕ್ತಿಗಳ ಗುರುತು ಪತ್ತೆ ಹಚ್ಚುವ ಕೆಲಸ ಆರಂಭಿಸಿದ್ದಾರೆ. ಸ್ಲೀಪರ್ ಕೋಚ್ ಬಸ್ಸು ಆಗಿದ್ದ ಕಾರಣ ಪ್ರಯಾಣಿಕರು ನಿದ್ದೆ ಮಾಡುತ್ತಿದ್ದರು. ಸಾಧಾರಣವಾಗಿ ವೋಲ್ವೋ ಬಸ್ಸಿನಲ್ಲಿ ಕಿಟಕಿಯ ಗಾಜುಗಳು ಸಂಪೂರ್ಣವಾಗಿ ಲಾಕ್ ಆಗಿರುತ್ತದೆ. ಹೀಗಿದ್ದರೂ ಬೆಂಕಿ ಕಾಣಿಸಿದ ಕೂಡಲೇ ಕೆಲ ಪ್ರಯಾಣಿಕರು ಗಾಜನ್ನು ಒಡೆದು ಕೆಳಗೆ ಹಾರಿ ಜೀವ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.



















