ಕಲಬುರಗಿ : ಇದೇ ನವೆಂಬರ್ 2ರಂದು ಕಲಬುರಗಿಯ ಚಿತ್ತಾಪುರದಲ್ಲಿ ಪಥಸಂಚಲನ ನಡೆಸುವ ಕುರಿತು ಆರ್‌ಎಸ್‌ಎಸ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಇಂದು ವಿಚಾರಣೆ ನಡೆಸಿದ ಕಲಬುರಗಿ ಹೈಕೋರ್ಟ್ ಪೀಠ, ಸರ್ಕಾರಕ್ಕೆ ಕೆಲ ಮಹತ್ವದ ಸಲಹೆ ಸೂಚನೆಗಳನ್ನು ನೀಡಿ ಯಾವುದೇ ಆದೇಶ ನೀಡದೆ ವಿಚಾರಣೆಯನ್ನು ಅಕ್ಟೋಬರ್ 30ಕ್ಕೆ ಮುಂದೂಡಿದೆ.
ಸರ್ಕಾರದ ಪರ ವಕೀಲ ಎಜಿ ಶಶಿಕಿರಣ್ ಶೆಟ್ಟಿ ವಾದ
ಜಿಲ್ಲಾಧಿಕಾರಿ ತಮ್ಮ ವರದಿಯಲ್ಲಿ 2 ಅಭಿಪ್ರಾಯಗಳನ್ನು ನೀಡಿದ್ದಾರೆ. ಜನರಿಗೆ ತೊಂದರೆಯಾಗುವ ಬಗ್ಗೆ ಕಲಬುರಗಿ ಎಸ್‌ಪಿ ವರದಿ ನೀಡಿದ್ದಾರೆ. ಪಥಸಂಚಲನದ ಮಾರ್ಗದಲ್ಲಿ ಸಂಚಾರ ದಟ್ಟಣೆಯಾಗುವ ಸಾಧ್ಯತೆಯಿದೆ. ಹೀಗಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಯಿದೆ. ಪರಿಸ್ಥಿತಿ ಸಾಮಾನ್ಯವಾದ ನಂತರ ಪಥಸಂಚಲನ ಸೂಕ್ತ. ಕೆಲ ವಾರಗಳ ಬಳಿಕ ಪಥಸಂಚಲನ ನಡೆಸುವುದು ಸೂಕ್ತವೆಂದು ವರದಿಯಿದೆ. ಇದರಿಂದ ಯಾವುದೇ ಸಂಘಟನೆಗಳಿಗೂ ಅನುಮತಿ ನೀಡದಂತೆ ವರದಿಯಿದೆ ಎಂದು ಸರ್ಕಾರದ ಪರ ವಕೀಲ ಎಜಿ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿದರು.
ಆರ್‌ಎಸ್‌ಎಸ್ ಪರ ವಕೀಲರ ವಾದ ಏನು?
ಹಿರಿಯ ವಕೀಲ ಅರುಣ್ ಶ್ಯಾಮ್ ಅವರು ಅರ್ಜಿದಾರರ ಪರವಾಗಿ ಹಾಜರಾಗಿದ್ದರು. ನ್ಯಾಯಾಲಯದ ವಿಶೇಷ ಪೀಠವು ಭಾನುವಾರ ವಿಚಾರಣೆ ನಡೆಸಿ, ನವೆಂಬರ್ 2ಕ್ಕೆ ಪಥಸಂಚಲನ ನಡೆಸಲು ಸೂಚಿಸಿತ್ತು. ಅಲ್ಲದೇ ಜಿಲ್ಲಾಧಿಕಾರಿಗೆ ಮನವಿ ನೀಡಲು ಸೂಚಿಸಿತ್ತು. ಅದರಂತೆ ಮನವಿ ನೀಡಿದ್ದೇವೆ. ಎಲ್ಲಾ ಸಿದ್ಧತೆಗಳು ಆಗಿವೆ. ರೂಟ್ ಮ್ಯಾಪ್ ಸಹ ನೀಡಿದ್ದೇವೆ.
ಈಗಾಗಲೇ ವಿಳಂಬವಾಗಿದ್ದು, ದಿನಕ್ಕೊಂದು ಸಂಘಟನೆಗಳು ಬರುತ್ತಿವೆ. ನವೆಂಬರ್ 2ರಂದು ಮೆರವಣಿಗೆ ನಡೆಸಲು ಒಪ್ಪಿಕೊಂಡಿದ್ದೇವೆ. ಸಮಸ್ಯೆಯನ್ನು ಸರ್ಕಾರ ಸೃಷ್ಟಿಸುತ್ತಿದೆ. ಇತರ ಸಂಘಟನೆಗಳು ಆ ದಿನವೇ ಮೆರವಣಿಗೆ ನಡೆಸುವ ಮೂಲಕ ನಮ್ಮ ಮಾರ್ಗ ಮೆರವಣಿಗೆಯನ್ನು ತಡೆಯಲು ಯತ್ನಿಸುತ್ತಿವೆ ಎಂದು ಕೋರ್ಟ್‌ನ ಗಮನಕ್ಕೆ ವಕೀಲರು ತಂದರು. ಹಿಂದಿನ ವಿಚಾರಣೆಯಲ್ಲಿ ಮಾರ್ಗ ನೀಡುವುದಾಗಿ ಒಪ್ಪಂದವಾಗಿತ್ತು. ನಾವು ಅವರಿಗೆ ಸಾಕಷ್ಟು ಸಮಯ ನೀಡಿದ್ದೇವೆ. ಈಗ ಹತ್ತು ಸಂಘಟನೆಗಳು ಬಂದು ಅದೇ ದಿನ ಮತ್ತು ಅದೇ ಸಮಯದಲ್ಲಿ ಪ್ರತಿಭಟನೆ ಮಾಡಲು ಬಯಸುತ್ತೇವೆ ಎಂದು ಹೇಳುತ್ತಿವೆ. ನಾವು ನಮ್ಮ ಪಥ ಸಂಚಲನ ಕಾರ್ಯಕ್ರಮವನ್ನು ಮುಂದೂಡುವುದಿಲ್ಲ ಮುಂದುವರಿಸುತ್ತೇವೆ. ಅವರಿಗೆ ತಕ್ಕ ರಕ್ಷಣೆಯನ್ನು ನೀಡಲಿ ಮತ್ತು ಇತರ ಸಂಘಟನೆಗಳು ಬೇರೆ ದಿನ ಪ್ರತಿಭಟನೆ ನಡೆಸಲಿ ಎಂದು ಕೋರ್ಟ್‌ಗೆ ವಿನಂತಿ ಮಾಡಿಕೊಂಡರು.
ಅಕ್ಟೋಬರ್ 30 ಕ್ಕೆ ವಿಚಾರಣೆ ಮುಂದೂಡಿಕೆ :
ಅಂತಿಮವಾಗಿ, ಕಾರ್ಯಕ್ರಮ ಸಂಘಟಕರ ಜೊತೆ ಅಕ್ಟೋಬರ್ 28ಕ್ಕೆ ಶಾಂತಿ ಸಭೆ ನಡೆಸಲು ಸರ್ಕಾರಕ್ಕೆ ನಿರ್ದೇಶಿಸಿದ ನ್ಯಾಯಮೂರ್ತಿಗಳು, ಎಲ್ಲರೂ ಸಹಕಾರ ನೀಡಬೇಕು ಎಂದು ಸೂಚಿಸಿದರು. ಸಭೆಯ ತೀರ್ಮಾನವನ್ನು ಅಕ್ಟೋಬರ್ 30ರ ಮಧ್ಯಾಹ್ನ 2.30ಕ್ಕೆ ತಿಳಿಸಿ ಆ ದಿನವೇ ವಿಚಾರಣೆ ಮುಂದುವರೆಸಲಾಗುವುದು ಎಂದು ಹೇಳಿದ್ದಾರೆ.



















