ಹೈದರಾಬಾದ್: “ನಾನು ಎಚ್ಚರಗೊಂಡಾಗ, ಇಡೀ ಬಸ್ ಹೊತ್ತಿ ಉರಿಯುತ್ತಿತ್ತು. ನನಗೆ ಏನು ಮಾಡಬೇಕೆಂದು ತೋಚಲಿಲ್ಲ. ಹಿಂಬದಿಯ ಬಾಗಿಲು ಮುರಿದುಹೋಗಿದ್ದರಿಂದ, ನಾನು ಕೂಡಲೇ ಅಲ್ಲಿಂದ ಕೆಳಗೆ ಜಿಗಿದೆ. ಈ ವೇಳೆ ನನಗೆ ಅಲ್ಪಸ್ವಲ್ಪ ಗಾಯಗಳಾದವು”.
ಹೈದರಾಬಾದ್-ಬೆಂಗಳೂರು ಸ್ಲೀಪರ್ ಬಸ್ ದುರಂತದಲ್ಲಿ ಬದುಕುಳಿದಿರುವ ಹರಿಕಾ ಅವರ ಮಾತಿದು. ಬದುಕುಳಿದ ಕೆಲವೇ ಕೆಲವು ಪ್ರಯಾಣಿಕರಲ್ಲಿ ಒಬ್ಬರಾದ ಹರಿಕಾ ದುರಂತದ ಕ್ಷಣವನ್ನು ಈ ರೀತಿ ವಿವರಿಸಿದ್ದಾರೆ. “ಇದು ಸ್ಲೀಪರ್ ಬಸ್ ಆಗಿದ್ದರಿಂದ, ಸೀಟುಗಳಿಗೆ ಕರ್ಟನ್‌ಗಳಿದ್ದವು. ಇದರಿಂದಾಗಿ ಬೇರೆ ಸೀಟುಗಳಲ್ಲಿ ಯಾರು ಇದ್ದಾರೆ ಎಂದು ನೋಡಲು ಸಾಧ್ಯವಾಗಲಿಲ್ಲ,” ಎಂದು ಅವರು ಹೇಳಿದ್ದಾರೆ. ಅಲ್ಲದೇ, ದುರಂತದ ಸಮಯದಲ್ಲಿ ಹೆಚ್ಚಿನ ಪ್ರಯಾಣಿಕರು ಗಾಢ ನಿದ್ರೆಯಲ್ಲಿದ್ದರು. ಹೀಗಾಗಿ ಹೆಚ್ಚಿನ ಸಾವು ನೋವು ಸಂಭವಿಸಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಶುಕ್ರವಾರ ಬೆಳಗಿನ ಜಾವ ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಐಷಾರಾಮಿ ಸ್ಲೀಪರ್ ಬಸ್‌ಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ, ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡು 20ಕ್ಕೂ ಹೆಚ್ಚು ಪ್ರಯಾಣಿಕರು ಸಜೀವ ದಹನವಾಗಿದ್ದಾರೆ. ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
“ನಾವು ಮೊದಲು ಬಸ್ಸಿನ ಮುಂಭಾಗದ ಬಾಗಿಲಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದೆವು. ಆದರೆ ಅದು ಲಾಕ್ ಆಗಿತ್ತು. ನಂತರ ನಾವು ಹಿಂಭಾಗದ ತುರ್ತು ಕಿಟಕಿಯನ್ನು ಒಡೆದು ಹೊರಗೆ ಜಿಗಿದೆವು. ಅದು ಎತ್ತರವಾಗಿದ್ದರಿಂದ ಕೆಲವರು ಕೆಳಗೆ ಬಿದ್ದು ಪ್ರಜ್ಞೆ ತಪ್ಪಿದರು. ಇನ್ನು ಕೆಲವರು ಚಾಲಕನ ಸೀಟಿನ ಬಳಿಯ ಕಿಟಕಿಗಳನ್ನು ಒಡೆದು ಪಾರಾದರು,” ಎಂದು ಮತ್ತೊಬ್ಬ ಪ್ರಯಾಣಿಕ ಜಯಂತ್ ಕುಶ್ವಾಹ ತಿಳಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ಬೆಂಕಿ ಹೊತ್ತಿಕೊಂಡ ನಂತರ ವೈರ್‌ಗಳು ಕರಗಿ ಮುಖ್ಯ ದ್ವಾರ ಜಾಮ್ ಆಗಿರುವ ಸಾಧ್ಯತೆಯಿದೆ. ಸುಮಾರು 20 ಜನರು ಕಿಟಕಿಗಳನ್ನು ಒಡೆದು ಹೊರಗೆ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ಘಟನೆಯ ನಂತರ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಶಂಕಿಸಲಾಗಿದೆ. ಕೆಲವು ಮೃತದೇಹಗಳು ಗುರುತು ಸಿಗದಷ್ಟು ಸುಟ್ಟು ಕರಕಲಾಗಿವೆ ಎಂದು ಟಿಡಿಪಿ ಸಂಸದೆ ಬೈರೆಡ್ಡಿ ಶಬರಿ ತಿಳಿಸಿದ್ದಾರೆ. ವಿಧಿವಿಜ್ಞಾನ ತಂಡವು ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದೆ. ಆಂಧ್ರ ಪ್ರದೇಶ ಸಾರಿಗೆ ಇಲಾಖೆಯು ಬಸ್‌ನ ಫಿಟ್‌ನೆಸ್ ಕುರಿತು ತನಿಖೆ ನಡೆಸುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ದುರಂತಕ್ಕೆ ತೀವ್ರ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ 50,000 ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 44ರಲ್ಲಿ, ಕರ್ನೂಲ್ ಜಿಲ್ಲೆಯ ಉಲ್ಲಿಂಡಕೊಂಡ ಬಳಿ ಮುಂಜಾನೆ ಸುಮಾರು 2:45 ರಿಂದ 3:30ರ ಸಮಯದಲ್ಲಿ ಈ ಅಪಘಾತ ಸಂಭವಿಸಿದೆ. ಕಾವೇರಿ ಟ್ರಾವೆಲ್ಸ್‌ಗೆ ಸೇರಿದ ಈ ಬಸ್‌ನಲ್ಲಿ ಚಾಲಕ ಮತ್ತು ಸಹಾಯಕ ಸೇರಿ ಸುಮಾರು 42 ಮಂದಿ ಪ್ರಯಾಣಿಸುತ್ತಿದ್ದರು. ದ್ವಿಚಕ್ರ ವಾಹನವೊಂದು ಬಸ್‌ಗೆ ಡಿಕ್ಕಿ ಹೊಡೆದು ಅದರ ಅಡಿಯಲ್ಲಿ ಸಿಲುಕಿಕೊಂಡಿದೆ. ಇದರಿಂದಾಗಿ ಕಿಡಿ ಹೊತ್ತಿಕೊಂಡು, ನೋಡನೋಡುತ್ತಿದ್ದಂತೆ ಇಡೀ ಬಸ್‌ಗೆ ಬೆಂಕಿ ಆವರಿಸಿದೆ ಎಂದು ಪೊಲೀಸರು ಶಂಕಿಸಿದ್ದಾರೆ.



















