ತಿರುವನಂತಪುರಂ : ಕೇರಳ ಪ್ರವಾಸದಲ್ಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶಬರಿಮಲೆಗೆ ಭೇಟಿ ನೀಡಿ, ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದಾರೆ.

ಇರುಮುಡಿ ಹೊತ್ತು ಶಬರಿಮಲೆಗೆ ಭೇಟಿ ನೀಡಿದ ದ್ರೌಪದಿ ಮುರ್ಮು ಅವರು ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದು, ಈ ಮೂಲಕ ಶಬರಿಮಲೆಗೆ ಭೇಟಿ ನೀಡಿದ ಮೊದಲ ಹಾಲಿ ರಾಷ್ಟ್ರಪತಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.
ಸೋಮವಾರ ಸಂಜೆ 6:20ರ ಸುಮಾರಿಗೆ ತಿರುವನಂತಪುರಂಕ್ಕೆ ಆಗಮಿಸಿದ ಮುರ್ಮು ಅವರಿಂದು ಹೆಲಿಕಾಪ್ಟರ್ ಮೂಲಕ ಕೇರಳದ ಪ್ರಮಾಡಂ ಇನ್‌ಡೋರ್ ಸ್ಟೇಡಿಯಂಗೆ ಬಂದಿಳಿದರು, ಈ ವೇಳೆ ಹೆಲಿಕಾಪ್ಟರ್ ಟೈರ್ ಕಾಂಕ್ರೀಟ್‌ನಲ್ಲಿ ಹೂತುಹೋಯಿತು. ಬಳಿಕ ಅಗ್ನಿಶಾಮಕ ಸಿಬ್ಬಂದಿಗಳು ಹೆಲಿಕಾಪ್ಟರ್‌ನ್ನು ತಳ್ಳಿ ಬದಿಸರಿಸಿದರು. ನಂತರ ಅಲ್ಲಿಂದ ಶಬರಿಮಲೆಗೆ ತೆರಳಿದ ಮುರ್ಮು ಅವರು, ತುಲಾ ಮಾಸ ಪೂಜೆಯ ಕೊನೆಯ ದಿನದಂದು ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದಾರೆ.
ನಾಳೆ (ಅ.23) ತಿರುವನಂತಪುರದ ರಾಜಭವನದಲ್ಲಿ ಮಾಜಿ ರಾಷ್ಟ್ರಪತಿ ಕೆ.ಆರ್.ನಾರಾಯಣನ್ ಅವರ ಪ್ರತಿಮೆಯನ್ನು ದ್ರೌಪದಿ ಮುರ್ಮು ಅನಾವರಣಗೊಳಿಸಲಿದ್ದಾರೆ. ನಂತರ ವರ್ಕಲಾದ ಶಿವಗಿರಿ ಮಠದಲ್ಲಿ ಶ್ರೀ ನಾರಾಯಣ ಗುರುಗಳ ಮಹಾಸಮಾಧಿಯ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಅದೇ ದಿನ ಪಲೈನಲ್ಲಿರುವ ಸೇಂಟ್ ಥಾಮಸ್ ಕಾಲೇಜಿನ ಪ್ಲಾಟಿನಂ ಜುಬಿಲಿ ಸಮಾರೋಪ ಸಮಾರಂಭದಲ್ಲಿಯೂ ಭಾಗಿಯಾಗಲಿದ್ದಾರೆ. ಅ.24ರಂದು ಎರ್ನಾಕುಲಂನ ಸೇಂಟ್ ತೆರೇಸಾ ಕಾಲೇಜಿನ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.



















