ಲಕ್ನೋ: ಬೆಳಕಿನ ಹಬ್ಬ ದೀಪಾವಳಿಯ ಸಂದರ್ಭದಲ್ಲಿ ಉತ್ತರ ಪ್ರದೇಶದ ಪೊಲೀಸ್ ಅಧಿಕಾರಿಯೊಬ್ಬರ ಮಾನವೀಯ ನಡೆಯೊಂದು ಅಂತರ್ಜಾಲದಲ್ಲಿ ಲಕ್ಷಾಂತರ ಜನರ ಹೃದಯ ಗೆದ್ದಿದೆ. ದಿನವಿಡೀ ಒಂದೂ ಮಣ್ಣಿನ ದೀಪವನ್ನು ಮಾರಾಟ ಮಾಡಲು ಸಾಧ್ಯವಾಗದೆ ಕಂಗಾಲಾಗಿದ್ದ ವೃದ್ಧೆಯೊಬ್ಬರ ಬಳಿ ಇದ್ದ ಎಲ್ಲಾ ದೀಪಗಳನ್ನು ಖರೀದಿಸುವ ಮೂಲಕ ಪೊಲೀಸ್ ಅಧಿಕಾರಿಯೊಬ್ಬರು ಅವರ ಬಾಳಿಗೆ ಬೆಳಕಾಗಿದ್ದಾರೆ.
ಈ ಭಾವನಾತ್ಮಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಧನತೇರಸ್ ದಿನದಂದು, ಹಾಪುರ್ ಗ್ರಾಮಾಂತರ ಪೊಲೀಸ್ ಠಾಣೆಯ ಪ್ರಭಾರಿ ವಿಜಯ್ ಗುಪ್ತಾ ಅವರು ಮಾರುಕಟ್ಟೆಯಲ್ಲಿ ಗಸ್ತು ತಿರುಗುತ್ತಿದ್ದಾಗ, ಧರ್ಮವತಿ ಎಂಬ ವೃದ್ಧೆ ದೀಪಗಳು ಮಾರಾಟವಾಗದೆ ನೊಂದು ಕುಳಿತಿರುವುದನ್ನು ಗಮನಿಸಿದರು.
ಅವರ ಬಳಿ ವಿಚಾರಿಸಿದಾಗ, ದಿನವಿಡೀ ಒಬ್ಬನೇ ಒಬ್ಬ ಗ್ರಾಹಕ ಬಂದಿಲ್ಲ. ಎಲ್ಲ ದೀಪಗಳೂ ಹಾಗೆಯೇ ಉಳಿದಿವೆ. ಇದರಿಂದ ಕಂಗಾಲಾಗಿದ್ದೇನೆ ಎಂದು ವೃದ್ಧೆ ನೋವು ತೋಡಿಕೊಂಡಿದ್ದಾರೆ. ಇದನ್ನು ಕೇಳಿ ಮರುಗಿದ ಪೊಲೀಸ್ ಅಧಿಕಾರಿ ವಿಜಯ್ ಗುಪ್ತಾ, ವೃದ್ಧೆಯ ಬಳಿ ಇದ್ದ ಎಲ್ಲಾ ದೀಪಗಳನ್ನು ಖರೀದಿಸಿದ್ದಾರೆ.
“ಭಾವುಕರಾದ ವೃದ್ಧೆ”
ಪೊಲೀಸರ ಈ ನಡೆಗೆ ವೃದ್ಧೆ ಭಾವುಕರಾಗಿದ್ದು, ಅವರ ಕಣ್ಣುಗಳಲ್ಲಿ ಸಂತೋಷದ ಕಂಬನಿ ತುಂಬಿಬಂದಿದೆ. “ದಿನವಿಡೀ ಒಬ್ಬನೇ ಒಬ್ಬ ಗ್ರಾಹಕ ಬಂದಿರಲಿಲ್ಲ, ಆದರೆ ಈ ಪೊಲೀಸ್ ಅಧಿಕಾರಿಗಳು ಬಂದು ನನ್ನೆಲ್ಲಾ ದೀಪಗಳನ್ನು ಕೊಂಡುಕೊಂಡರು,” ಎಂದು ಅವರು ಹೇಳಿದ್ದಾರೆ. “ನನ್ನ ಆಶೀರ್ವಾದ ಸದಾ ನಿಮ್ಮ ಮೇಲಿರುತ್ತದೆ. ನೀವು ದೀರ್ಘಾಯುಷಿಗಳಾಗಿ ಬಾಳಿ,” ಎಂದು ಅವರು ಮನಸಾರೆ ಹರಸಿದ್ದಾರೆ. ವಿಡಿಯೋದ ಕೊನೆಯಲ್ಲಿ ಪೊಲೀಸ್ ಅಧಿಕಾರಿ ಆಕೆಗೆ 1000 ರೂಪಾಯಿ ನೀಡುವುದನ್ನು ಕಾಣಬಹುದು.
“ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆ”
ಈ ವಿಡಿಯೋಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ‘ಇದು ಪೊಲೀಸರ ಹೃದಯಸ್ಪರ್ಶಿ ಕಾರ್ಯ’ ಎಂದಿರುವ ಬಳಕೆದಾರರೊಬ್ಬರು, ‘ಇಂತಹ ಮಾನವೀಯತೆಯ ಕಾರ್ಯಗಳು ನಿಜವಾದ ದೀಪಾವಳಿಯ ಸ್ಫೂರ್ತಿಯನ್ನು ಸಾರುತ್ತವೆ’ ಎಂದು ಬರೆದಿದ್ದಾರೆ. ‘ಸ್ಥಳೀಯ ಕುಶಲಕರ್ಮಿಗಳನ್ನು ಬೆಂಬಲಿಸುವುದು ಹಬ್ಬದ ಸಮಯದಲ್ಲಿ ನಿಜವಾಗಿಯೂ ಜೀವನವನ್ನು ಬೆಳಗಿಸುತ್ತದೆ’ ಎಂದು ಇನ್ನೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಈ ಘಟನೆಯು ಜನರ ಕಣ್ಣಲ್ಲಿ ನೀರು ತರಿಸಿದ್ದು, ನಮ್ಮ ಹಬ್ಬಗಳು ಪ್ರೀತಿ, ಕರುಣೆ ಮತ್ತು ನಮ್ರತೆಯ ಸಂಕೇತ ಎಂಬುದನ್ನು ನೆನಪಿಸುತ್ತದೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.