ಇಸ್ಲಾಮಾಬಾದ್ : ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಭಾರತಕ್ಕೆ ಬೆದರಿಕೆ ನೀಡಿದ ಹಿನ್ನಲೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪಾಕಿಸ್ತಾನದ ಪ್ರತಿ ಇಂಚು ಭೂಪ್ರದೇಶವೂ ಬ್ರಹ್ಮೋಸ್‌ನ ಕಣ್ಣಳತೆಯಲ್ಲಿದೆ. ಆಪರೇಷನ್ ಸಿಂದೂರದಲ್ಲಿ ತೋರಿಸಿದ್ದು ಬರೀ ಟ್ರೈಲರ್ ಮಾತ್ರ ಎಂದು ಎಚ್ಚರಿಕೆ ನೀಡಿದ್ದಾರೆ.ಕಾಕುಲ್‌ನಲ್ಲಿರುವ ಪಾಕಿಸ್ತಾನ ಮಿಲಿಟರಿ ಅಕಾಡೆಮಿಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಅಸಿಮ್ ಮುನೀರ್ ಇದೀಗ ಪಾಕಿಸ್ತಾನ ವಿಸ್ತರಿಸುತ್ತಿರುವ ಮಿಲಿಟರಿ ಪಡೆಯು ಭಾರತದ ಭೌಗೋಳಿಕ ಯುದ್ಧಭೂಮಿಯನ್ನು ಛಿದ್ರಗೊಳಿಸಬಹುದು ಎಂದು ಬೆದರಿಕೆ ನೀಡಿದ್ದರು.

ಇದಕ್ಕೆ ಪ್ರತಿಕ್ರಿಯೆಯಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲಖನೌನ ಸರೋಜಿನಿ ನಗರದ ಬ್ರಹ್ಮೋಸ್ ಏರೋಸ್ಪೇಸ್ ಘಟಕದಲ್ಲಿ ಮೊದಲ ಬ್ಯಾಚ್‌ನ ಬ್ರಹ್ಮೋಸ್ ಕ್ಷಿಪಣಿಗಳನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಜೊತೆಗೂಡಿ ಉದ್ಘಾಟಿಸಿ ಮಾತನಾಡಿದ ಅವರು ಪಾಕಿಸ್ತಾನದ ಪ್ರತಿಯೊಂದು ಇಂಚು ನಮ್ಮ ಬ್ರಹ್ಮೋಸ್ ಕ್ಷಿಪಣಿಯ ವ್ಯಾಪ್ತಿಯಲ್ಲಿದೆ. ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆಪರೇಷನ್ ಸಿಂಧೂರ್ ಬರೀ “ಟ್ರೈಲರ್” ಅಷ್ಟೇ , ಸಂದರ್ಭ ಬಂದರೆ ಪಾಕಿಸ್ತಾನವನ್ನು ಸೃಷ್ಟಿಸಿರುವ ಭಾರತಕ್ಕೆ ಅದನ್ನು ನಾಶ ಮಾಡುವುದೂ ಗೊತ್ತಿದೆ ಎಂದು, ಭಾರತವನ್ನು ಕೆಣಕುತ್ತಿರುವ ಮುನೀರ್‌ಗೆ ನೇರವಾಗಿ ಎಚ್ಚರಿಕೆ ನೀಡಿದ್ದಾರೆ.

ಹಾಗೆಯೇ ಬ್ರಹ್ಮೋಸ್ ಕೇವಲ ಒಂದು ಕ್ಷಿಪಣಿಯಲ್ಲ, ಇದು ಭಾರತದ ರಾಜತಾಂತ್ರಿಕ ವಿಶ್ವಾಸದ ಪುರಾವೆ. ಸೇನೆಯಿಂದ ಹಿಡಿದು ನೌಕಾದಳ, ವಾಯುಪಡೆಯವರೆಗೆ ಬ್ರಹ್ಮೋಸ್ ನಮ್ಮ ರಕ್ಷಣಾ ಪಡೆಗಳ ಮುಖ್ಯ ಆಧಾರಸ್ತಂಭವಾಗಿದೆ. ಭಾರತ ತನ್ನ ಕನಸುಗಳನ್ನು ನನಸಾಗಿಸಿಕೊಳ್ಳುತ್ತದೆ ಎಂಬ ನಮ್ಮ ನಂಬಿಕೆಗೆ ಬ್ರಹ್ಮೋಸ್ ಬಲ ತುಂಬಿದೆ’ ಎಂದು ಬಣ್ಣಿಸಿದರು.