ಬೆಂಗಳೂರು : ವೈದೈ ಕೃತಿಕಾ ರೆಡ್ಡಿ ಕೊಲೆ ಕೇಸ್‌ಗೆ ಸಂಬಂಧಿಸಿದಂತೆ ಗ್ಯಾಸ್ಟ್ರೋ ಎಂಟ್ರಾಲಜಿ ಆಸ್ಪತ್ರೆ (IGOT-Institute of Gastroentrology Science and Organ Transplant) ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ಈ ಮೂಲಕ ಆರೋಪಿ ಮಹೇಂದ್ರ ರೆಡ್ಡಿ ಜುಲೈ ತಿಂಗಳಲ್ಲಿಯೇ ಕೆಲಸ ಬಿಟ್ಟಿದ್ದರು ಎಂದು ತಿಳಿಸಿದೆ.

ಆರೋಪಿ ಮಹೇಂದ್ರ ರೆಡ್ಡಿ 2023-24ನೇ ಶೈಕ್ಷಣಿಕ ವರ್ಷದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ (Rajeev Gandhi University) ಅಂಗೀಕೃತ ಗ್ಯಾಸ್ಟ್ರೋ ಸರ್ಜನ್ ಆಗಿದ್ದರು. ಇದೇ ಮಾರ್ಚ್‌ನಲ್ಲಿ ಫೆಲೋಷಿಪ್ ಕೋರ್ಸ್ ಅನ್ನು ಪೂರ್ಣಗೊಳಿಸಿದ್ದಾರೆ. ಅದಾದ ಬಳಿಕ ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿರುವ ಗ್ಯಾಸ್ಟ್ರೋ ಎಂಟ್ರಾಲಜಿ ಆಸ್ಪತ್ರೆಯಲ್ಲಿ ಮಾರ್ಚ್‌ನಿಂದ ಗುತ್ತಿಗೆ ಆಧಾರದ ಮೇಲೆ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅದಾದ ಬಳಿಕ 2025ರ ಜುಲೈ 2ರಂದು ಕೆಲಸದಿಂದ ಬಿಡುಗಡೆ ಹೊಂದಿದ್ದಾರೆ ಎಂದು ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಕರಣದ ಹಿನ್ನೆಲೆ : 2024ರ ಮೇ 26ರಂದು ಮಹೇಂದ್ರ ಮತ್ತು ಕೃತಿಕಾ ರೆಡ್ಡಿಗೆ ಮದುವೆಯಾಗಿತ್ತು. ವೈದ್ಯೆಗೆ ಅಜೀರ್ಣ, ಗ್ಯಾಸ್ಟ್ರಿಕ್ ಮತ್ತು ಲೋ ಶುಗರ್ ಸಮಸ್ಯೆ ಇತ್ತು. ಈ ವಿಚಾರ ಮಹೇಂದ್ರನಿಗೆ ತಿಳಿಸದೆ ಮದುವೆ ಮಾಡಿದ್ದರು. ಮದುವೆಯಾದ ಬಳಿಕ ಈ ವಿಚಾರ ಮಹೇಂದ್ರನಿಗೆ ಗೊತ್ತಾಗಿತ್ತು. ನಿತ್ಯ ವಾಂತಿ ಹಾಗೂ ಇತರ ಸಮಸ್ಯೆಯಿಂದ ಕೃತಿಕಾ ಬಳಲ್ತಿದ್ದರು. ಇದೇ ಕಾರಣಕ್ಕೆ ಆರೋಪಿ ಕೊಲೆಗೆ ಸಂಚು ರೂಪಿಸಿದ್ದ ಎನ್ನಲಾಗಿದೆ.
ಗಂಡನಿಂದಲೇ ಕೊಲೆಯಾದ ವೈದ್ಯೆ ಕೃತಿಕಾ ರೆಡ್ಡಿ ಆಗರ್ಭ ಶ್ರೀಮಂತೆ. ಕುಟುಂಬದಲ್ಲಿ ಹಣಕಾಸಿಗೆ ಯಾವುದೇ ತೊಂದರೆ ಇರಲಿಲ್ಲ. ತಂದೆ ಮುನಿರೆಡ್ಡಿ ನೂರಾರು ಕೋಟಿ ಆಸ್ತಿ ಒಡೆಯನಾಗಿದ್ದಾರೆ. ಮುನ್ನೇಕೊಳಲುವಿನಲ್ಲಿ ಮುನಿರೆಡ್ಡಿ ಜಮೀನ್ದಾರರಾಗಿದ್ದು, ತಿಂಗಳಿಗೆ ಹತ್ತಾರು ಲಕ್ಷ ಬಾಡಿಗೆಯೇ ಬರುತ್ತೆ. ಹೀಗಾಗಿ ಮಗಳನ್ನ ಅದ್ಧೂರಿಯಾಗಿಯೇ ಮದ್ವೆ ಮಾಡಿಕೊಟ್ಟಿದ್ದರು. ಇತ್ತ ಕೊಲೆಗಡುಕ ಡಾಕ್ಟರ್ ಮಹೇಂದ್ರ ರೆಡ್ಡಿ ಕುಟುಂಬ ಕೂಡ ಕಡಿಮೆ ಏನಿರಲಿಲ್ಲ. ಆದ್ರೂ ಮಹೇಂದ್ರ ಕ್ಲಿನಿಕ್ ಆರಂಭಿಸಲು ಮುನಿರೆಡ್ಡಿಯೇ ಹಣಕಾಸಿನ ನೆರವು ನೀಡಿದ್ರು ಎಂದು ತಿಳಿದುಬಂದಿದೆ.
ಈ ನಡುವೆ ಮಹೇಂದ್ರ ರೆಡ್ಡಿಗೆ ಬೇರೆ ಯುವತಿಯೊಂದಿಗೆ ಅಕ್ರಮ ಸಂಬಂಧ ಇರುವ ಶಂಕೆ ಕೂಡ ವ್ಯಕ್ತವಾಗಿದೆ. ಅಕ್ರಮ ಸಂಬಂಧದಿಂದಲೇ ಮಗಳನ್ನ ಕೊಲೆ ಮಾಡಿರುವುದಾಗಿ ವೈದ್ಯ ಪತಿ ವಿರುದ್ಧ ಕೃತಿಕಾ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಅಕ್ರಮ ಸಂಬಂಧ ಇರೋದು ದೃಢವಾದಂತೆ ಕಾಣ್ತಿದೆ. ಆದ್ರೆ ಇದೇ ಕಾರಣಕ್ಕೆ ಕೊಲೆ ಮಾಡಿದ್ದಾನೆಯೇ ಅನ್ನೋದು ಇನ್ನೂ ನಿಗೂಢ. ಹೀಗಾಗಿ ಹಲವು ಆಯಾಮಗಳಲ್ಲಿ ಮಾರತ್‌ಹಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ