ನವದೆಹಲಿ : 1984ರ ಆಪರೇಷನ್ ಬ್ಲೂ ಸ್ಟಾರ್ ಒಂದು ತಪ್ಪು ನಿರ್ಧಾರವಾಗಿತ್ತು ಮತ್ತು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಆ ತಪ್ಪಿಗಾಗಿ ತಮ್ಮ ಪ್ರಾಣವನ್ನೇ ತೆರಬೇಕಾಯಿತು ಎಂದು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಹೇಳಿದ್ದಾರೆ. ಈ ಕಾರ್ಯಾಚರಣೆಯು ಸೇನೆ, ಪೊಲೀಸ್, ಗುಪ್ತಚರ ಮತ್ತು ನಾಗರಿಕ ಸೇವೆಯನ್ನು ಒಳಗೊಂಡ ಸಾಮೂಹಿಕ ನಿರ್ಧಾರವಾಗಿತ್ತು. ಹೀಗಾಗಿ ಅದಕ್ಕಾಗಿ ಕೇವಲ ಇಂದಿರಾ ಗಾಂಧಿಯವರನ್ನು ದೂಷಿಸಲಾಗದು ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಕಸೌಲಿಯಲ್ಲಿ ನಡೆದ ಸಾಹಿತ್ಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಚಿದಂಬರಂ, “ಯಾವುದೇ ಸೇನಾಧಿಕಾರಿಗಳಿಗೆ ಅಗೌರವ ತೋರದೆ ಹೇಳುವುದಾದರೆ, ಸ್ವರ್ಣ ಮಂದಿರವನ್ನು ಮರಳಿ ಪಡೆಯಲು ಅಂದು ಕೈಗೊಂಡ ನಿರ್ಧಾರ ಸರಿಯಾದುದಾಗಿರಲಿಲ್ಲ. ಕೆಲವು ವರ್ಷಗಳ ನಂತರ, ಸೇನೆಯನ್ನು ಹೊರಗಿಡುವ ಮೂಲಕ ಅದನ್ನು ಮರಳಿ ಪಡೆಯುವ ಸರಿಯಾದ ಮಾರ್ಗವನ್ನು ನಾವು ತೋರಿಸಿದೆವು. ಬ್ಲೂ ಸ್ಟಾರ್ ಒಂದು ತಪ್ಪು ದಾರಿಯಾಗಿತ್ತು ಮತ್ತು ಶ್ರೀಮತಿ ಗಾಂಧಿ ಆ ತಪ್ಪಿಗಾಗಿ ತಮ್ಮ ಪ್ರಾಣ ತೆತ್ತರು ಎಂಬುದನ್ನು ನಾನು ಒಪ್ಪುತ್ತೇನೆ,” ಎಂದು ಹೇಳಿದ್ದಾರೆ. ಜೂನ್ 1984 ರಲ್ಲಿ ಅಮೃತಸರದ ಸ್ವರ್ಣ ಮಂದಿರದಿಂದ ಭಯೋತ್ಪಾದಕರನ್ನು ಹೊರಹಾಕುವ ಗುರಿಯನ್ನು ಹೊಂದಿದ್ದ ಸೇನಾ ಕಾರ್ಯಾಚರಣೆಯ ನಿರ್ಧಾರ ಕೇವಲ ಇಂದಿರಾ ಗಾಂಧಿಯವರದ್ದಾಗಿರಲಿಲ್ಲ ಎಂದು ಅವರು ಪುನರುಚ್ಚರಿಸಿದ್ದಾರೆ.
ಇಂದಿನ ಪಂಜಾಬ್ ಬಗ್ಗೆ ಮಾತನಾಡಿದ ಚಿದಂಬರಂ, ಖಲಿಸ್ತಾನ್ ಕೂಗು ಬಹುತೇಕ ಮರೆಯಾಗಿದ್ದು, ಆರ್ಥಿಕ ಸಂಕಷ್ಟ ರಾಜ್ಯದ ಪ್ರಮುಖ ಸಮಸ್ಯೆಯಾಗಿ ಹೊರಹೊಮ್ಮಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. “ನಾನು ನೋಡಿದಂತೆ, ಖಲಿಸ್ತಾನ್ ಅಥವಾ ಪ್ರತ್ಯೇಕತೆಯ ಕೂಗು ಪ್ರಾಯೋಗಿಕವಾಗಿ ತಣ್ಣಗಾಗಿದೆ. ರಾಜ್ಯದ ನಿಜವಾದ ಸಮಸ್ಯೆ ಆರ್ಥಿಕ ಪರಿಸ್ಥಿತಿ. ಹೆಚ್ಚಿನ ಅಕ್ರಮ ವಲಸಿಗರು ಪಂಜಾಬ್‌ನಿಂದ ಬಂದವರಾಗಿದ್ದಾರೆ,” ಎಂದು ಅವರು ಹೇಳಿದರು.
ಆಪರೇಷನ್ ಬ್ಲೂ ಸ್ಟಾರ್ : ಪ್ರಧಾನಿ ಇಂದಿರಾ ಗಾಂಧಿ ಅವರ ಸರ್ಕಾರವು, ತೀವ್ರಗಾಮಿ ಬೋಧಕ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ ನೇತೃತ್ವದ ಪ್ರತ್ಯೇಕತಾವಾದಿ ಚಳವಳಿಯನ್ನು ಹತ್ತಿಕ್ಕಲು 1984ರ ಜೂನ್ 1 ರಿಂದ ಜೂನ್ 8 ರವರೆಗೆ ಆಪರೇಷನ್ ಬ್ಲೂ ಸ್ಟಾರ್ ಅನ್ನು ನಡೆಸಿತ್ತು. ಸ್ವರ್ಣ ಮಂದಿರದ ಅಕಾಲ್ ತಖ್ತ್ ಮತ್ತು ಇತರ ಭಾಗಗಳಲ್ಲಿ ಅಡಗಿದ್ದ ಭಿಂದ್ರನ್‌ವಾಲೆ ಮತ್ತು ಆತನ ಅನುಯಾಯಿಗಳನ್ನು ಹೊರಹಾಕಲು ಈ ಸೇನಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಈ ಕಾರ್ಯಾಚರಣೆಯಲ್ಲಿ ಟ್ಯಾಂಕ್‌ಗಳು ಮತ್ತು ಭಾರಿ ಫಿರಂಗಿಗಳನ್ನು ಬಳಸಲಾಗಿದ್ದು, ಉಗ್ರರು, ಸೈನಿಕರು ಮತ್ತು ನಾಗರಿಕರು ಸೇರಿದಂತೆ ನೂರಾರು ಜನರು ಸಾವನ್ನಪ್ಪಿದರು. ಈ ದಾಳಿಯು ಸಿಖ್ ಸಮುದಾಯಕ್ಕೆ ತೀವ್ರ ನೋವನ್ನುಂಟು ಮಾಡಿ, ವ್ಯಾಪಕ ಆಕ್ರೋಶಕ್ಕೆ ಕಾರಣವಾಯಿತು. ಈ ಕಾರ್ಯಾಚರಣೆಯ ತೀವ್ರ ಪರಿಣಾಮವಾಗಿ, ಅಕ್ಟೋಬರ್ 31, 1984 ರಂದು ಇಂದಿರಾ ಗಾಂಧಿಯವರನ್ನು ಅವರ ಸಿಖ್ ಅಂಗರಕ್ಷಕರೇ ಹತ್ಯೆಗೈದರು. ಇದು ಭಾರತದಾದ್ಯಂತ ಸಿಖ್ ವಿರೋಧಿ ದಂಗೆಗಳಿಗೆ ಕಾರಣವಾಯಿತು.