ಮಂಗಳೂರು : ನಿಷೇಧಿತ ಉಗ್ರ ಸಂಘಟನೆಯಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಪರವಾಗಿ ಪ್ರಚಾರ ಮಾಡಿದ್ದ ಕಡಬ ಮೂಲದ ಮುಸ್ಲಿಂ ಧರ್ಮಗುರುವನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಕರಾವಳಿಯಲ್ಲಿ ಮತ್ತೆ ನಿಷೇಧಿತ ಪಿಎಫ್‌ಐ ಸಂಘಟನೆ ಆಕ್ಟೀವ್ ಆಗಿದೆಯಾ ಎಂಬ ಅನುಮಾನ ಹುಟ್ಟಿಕೊಂಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕಡಬ ನಿವಾಸಿ ಸೈಯ್ಯದ್ ಇಬ್ರಾಹಿಂ ತಂಙಳ್ ಬಂಧಿತ ಆರೋಪಿ. ಈತ ವಾಟ್ಸಾಪ್ ಗ್ರೂಪ್‌ವೊಂದನ್ನು ರಚಿಸಿ ಪಿಎಫ್‌ಐ ಸದಸ್ಯರಿಗೆ ಮತ್ತೆ ಚಟುವಟಿಕೆ ಆರಂಭಿಸಲು ಪ್ರಚೋದನೆ ನೀಡುತ್ತಿದ ಎಂಬ ಆರೋಪ ಕೇಳಿಬಂದಿದೆ.
ಬಂಧೀತ ಆರೋಪಿ ಸೈಯ್ಯದ್ ಇಬ್ರಾಹಿಂ, PFI ಸಂಘಟನೆಯ ಪುನರ್ ರಚನೆಯ ಬಗ್ಗೆ ಪ್ರಚಾರ ಮಾಡುವುದಷ್ಟೇ ಅಲ್ಲದೇ ವಾಟ್ಸಾಪ್ನಲ್ಲಿ ಸಲಮಾನ್ ಸಲಮಾ ಎಂಬ ಗ್ರೂಪ್ ರಚನೆ ಮಾಡಿದ್ದ. ಈ ಗ್ರೂಪ್ ಮೂಲಕ ಭೂಗತರಾಗಿರುವ PFI ಸದಸ್ಯರನ್ನು ಸಂಪರ್ಕಿಸಿದ್ದ ಸೈಯ್ಯದ್ ಇಬ್ರಾಹಿಂ, ಮತ್ತೆ ಚಟುವಟಿಕೆ ಆರಂಭಿಸಲು ಪ್ರಚೋದನೆ ನೀಡುತ್ತಿದ್ದ.
ನಗರದ ಉರ್ವ ಸ್ಟೋರ್ ಬಳಿಯಿಂದ ಈತನನ್ನು ಬಂಧಿಸಿದ ಪೊಲೀಸರು, ಈತನಿಂದ ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಆ ಬಳಿಕ ಬೆಂಗಳೂರಿನಲ್ಲಿರುವ NIA ವಿಶೇಷ ನ್ಯಾಯಾಲಯಕ್ಕೆ ಸೈಯ್ಯದ್ ಇಬ್ರಾಹಿಂನನ್ನು ಹಾಜರು ಪಡಿಸಿದ್ದಾರೆ. ವಿಚಾರಣೆ ನಡೆಸಿದ ನ್ಯಾಯಲಯ, ಆರೋಪಿಯನ್ನು ಅ.24ವರೆಗೆ ನ್ಯಾಯಂಗ ಬಂಧನಕ್ಕೆ ನೀಡಿ ಆದೇಶಿಸಿದೆ.