ನವದೆಹಲಿ : ಶುಕ್ರವಾರ ನವದೆಹಲಿಯಲ್ಲಿ ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಅಮೀರ್ ಖಾನ್ ಮುಟ್ಟಾಕಿ ಅವರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಪತ್ರಕರ್ತರಿಗೆ ಪ್ರವೇಶ ನಿರಾಕರಿಸಲಾಗಿತ್ತು ಎಂಬ ವಿಚಾರ ಬೆಳಕಿಗೆ ಬಂದಿದ್ದು, ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಈ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರ, ಇದರಲ್ಲಿ ತನ್ನ ಯಾವುದೇ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದೆ.
ದೆಹಲಿಯಲ್ಲಿರುವ ಅಫ್ಘಾನಿಸ್ತಾನ ರಾಯಭಾರ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಮಹಿಳಾ ಪತ್ರಕರ್ತರಿಗೆ ಪ್ರವೇಶ ನೀಡದ ಕಾರಣ, ಹಲವು ಪತ್ರಕರ್ತರು ಮತ್ತು ರಾಜಕೀಯ ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉಡುಗೆಯ ನಿಯಮಗಳನ್ನು ಪಾಲಿಸಿದ್ದರೂ ಮಹಿಳಾ ವರದಿಗಾರರಿಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ಕೆಲವರು ಕಿಡಿಕಾರಿದ್ದಾರೆ.
ಸರ್ಕಾರದ ಸ್ಪಷ್ಟನೆ : ಇದೇ ವೇಳೆ ಈ ಘಟನೆಯಲ್ಲಿ ತಮ್ಮ ಯಾವುದೇ ಪಾತ್ರವಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ಪಷ್ಟಪಡಿಸಿದೆ. ಪತ್ರಿಕಾಗೋಷ್ಠಿಯ ಆಹ್ವಾನ ಪತ್ರಿಕೆಗಳನ್ನು ಮುಂಬೈನಲ್ಲಿರುವ ಅಫ್ಘಾನಿಸ್ತಾನದ ಕಾನ್ಸುಲ್ ಜನರಲ್ ಅವರು ನಿರ್ವಹಿಸಿದ್ದಾರೆ ಮತ್ತು ಅಫ್ಘಾನ್ ರಾಯಭಾರ ಕಚೇರಿಯು ಭಾರತ ಸರ್ಕಾರದ ವ್ಯಾಪ್ತಿಗೆ ಬರುವುದಿಲ್ಲ ಎಂದು ಸಚಿವಾಲಯ ತಿಳಿಸಿದೆ. ಅಫ್ಘಾನಿಸ್ತಾನದ ರಾಯಭಾರ ಕಚೇರಿಯು ಭಾರತ ಸರ್ಕಾರದ ವ್ಯಾಪ್ತಿಗೆ ಬರುವುದಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರವು ಮಹಿಳೆಯರ ಮೇಲೆ, ವಿಶೇಷವಾಗಿ ಅವರ ಶಿಕ್ಷಣ, ಉದ್ಯೋಗದ ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸಿರುವುದು ಇಲ್ಲಿ ಉಲ್ಲೇಖನೀಯ.
ಸರ್ಕಾರಕ್ಕೆ ವಿಪಕ್ಷ ನಾಯಕರ ತರಾಟೆ : ಈ ಘಟನೆಯು ರಾಜಕೀಯ ವಲಯದಲ್ಲೂ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮಾತನಾಡಿ, “ಭಾರತದ ಸಮರ್ಥ ಮಹಿಳೆಯರಿಗೆ ನಮ್ಮ ದೇಶದಲ್ಲಿಯೇ ಇಂತಹ ಅವಮಾನವನ್ನು ಹೇಗೆ ಸಹಿಸಿಕೊಳ್ಳಲಾಯಿತು?” ಎಂದು ಪ್ರಶ್ನಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಈ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದ್ದಾರೆ. ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ, “ಮಹಿಳಾ ಪತ್ರಕರ್ತೆಯರನ್ನು ಹೊರಗಿಟ್ಟಿರುವುದು ಆಘಾತಕಾರಿ. ತಮ್ಮ ಸಹೋದ್ಯೋಗಿಗಳಿಗೆ ಪ್ರವೇಶ ನಿರಾಕರಿಸಿದ್ದನ್ನು ತಿಳಿದ ತಕ್ಷಣವೇ ಪುರುಷ ಪತ್ರಕರ್ತರು ಗೋಷ್ಠಿಯಿಂದ ಹೊರನಡೆಯಬೇಕಿತ್ತು,” ಎಂದು ಅಭಿಪ್ರಾಯಪಟ್ಟಿದ್ದಾರೆ.
ಮುಟ್ಟಾಕಿ ಭೇಟಿಯ ಹಿನ್ನೆಲೆ : ಅಫ್ಘಾನಿಸ್ತಾನ ವಿದೇಶಾಂಗ ಸಚಿವ ಮುಟ್ಟಾಕಿ ಅವರು ಗುರುವಾರ ಭಾರತಕ್ಕೆ ಆಗಮಿಸಿದ್ದು, ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಈ ಭೇಟಿಯನ್ನು ಭಾರತ-ಅಫ್ಘಾನಿಸ್ತಾನ ಸಂಬಂಧಗಳ “ಮರುಹೊಂದಾಣಿಕೆಯ ಪ್ರಮುಖ ಹೆಜ್ಜೆ” ಎಂದು ಪರಿಗಣಿಸಲಾಗಿದೆ. ಮಾತುಕತೆಯ ವೇಳೆ, ಕಾಬೂಲ್‌ನಲ್ಲಿರುವ ಭಾರತದ ತಾಂತ್ರಿಕ ಮಿಷನ್ ಅನ್ನು ಪೂರ್ಣ ಪ್ರಮಾಣದ ರಾಯಭಾರ ಕಚೇರಿಯಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ಭಾರತ ಘೋಷಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಟ್ಟಾಕಿ, ಲಷ್ಕರ್-ಎ-ತೊಯ್ಬಾ ಮತ್ತು ಜೈಶ್-ಎ-ಮೊಹಮ್ಮದ್‌ನಂತಹ ಭಯೋತ್ಪಾದಕ ಸಂಘಟನೆಗಳಿಗೆ ಅಫ್ಘಾನಿಸ್ತಾನದಲ್ಲಿ ಯಾವುದೇ ಸ್ಥಾನವಿಲ್ಲ ಎಂದು ಈ ಜಂಟಿ ಸುದ್ದಿಯೋಷ್ಠಿಯಲ್ಲಿ ಹೇಳಿದ್ದರು.