ನವದೆಹಲಿ: 2025ರ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ಮುಗಿದು ಎರಡು ವಾರ ಕಳೆದರೂ, ಚಾಂಪಿಯನ್ ಭಾರತ ತಂಡಕ್ಕೆ ಇನ್ನೂ ಟ್ರೋಫಿ ಲಭಿಸಿಲ್ಲ. ಈ ವಿವಾದ ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಮುಖ್ಯಸ್ಥ ಮತ್ತು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (PCB) ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರು ತಮ್ಮ ಮೊಂಡುತನ ಮುಂದುವರಿಸಿದ್ದಾರೆ.
ಸೆಪ್ಟೆಂಬರ್ 28ರಂದು ನಡೆದ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಮಣಿಸಿ ಭಾರತ ಚಾಂಪಿಯನ್ ಆಗಿತ್ತು. ಆದರೆ, ಪಂದ್ಯದ ನಂತರ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ, ಪಾಕಿಸ್ತಾನದ ಆಂತರಿಕ ಸಚಿವರೂ ಆಗಿರುವ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ಭಾರತ ತಂಡ ನಿರಾಕರಿಸಿತ್ತು. ಇದಕ್ಕೆ ಪ್ರತೀಕಾರವಾಗಿ ನಖ್ವಿ ಅವರು ಟ್ರೋಫಿಯನ್ನು ಮೈದಾನದಿಂದ ತಮ್ಮೊಂದಿಗೆ ವಾಪಸ್ ಕೊಂಡೊಯ್ದಿದ್ದರು. ಅಂದು ಭಾರತ ತಂಡ ಟ್ರೋಫಿ ಇಲ್ಲದೆಯೇ ಸಂಭ್ರಮಾಚರಣೆ ಮಾಡಿತ್ತು.
“ಟ್ರೋಫಿ ಲಾಕ್ ಮಾಡಿದ ನಖ್ವಿ”
ಇದೀಗ ಮೊಹ್ಸಿನ್ ನಖ್ವಿ ಅವರು ಏಷ್ಯಾ ಕಪ್ ಟ್ರೋಫಿಯನ್ನು ದುಬೈನಲ್ಲಿರುವ ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ ಪ್ರಧಾನ ಕಚೇರಿಯ ಲಾಕರ್‌ನಲ್ಲಿ ಇಟ್ಟು ಬೀಗ ಹಾಕಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. “ನನ್ನ ಅನುಮತಿ ಮತ್ತು ವೈಯಕ್ತಿಕ ಉಪಸ್ಥಿತಿ ಇಲ್ಲದೆ ಭಾರತ ತಂಡಕ್ಕೆ ಯಾರೂ ಟ್ರೋಫಿಯನ್ನು ಹಸ್ತಾಂತರಿಸಬಾರದು” ಎಂದು ಅವರು ಕಚೇರಿಯ ಸಿಬ್ಬಂದಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಈ ಮೂಲಕ, ಭಾರತ ತಂಡವು ತನ್ನ ಕೈಯಿಂದಲೇ ಟ್ರೋಫಿಯನ್ನು ಸ್ವೀಕರಿಸಬೇಕು ಎಂಬ ತಮ್ಮ ಹಠಮಾರಿ ಧೋರಣೆಯನ್ನು ಅವರು ಮುಂದುವರಿಸಿದ್ದಾರೆ.
“ನಖ್ವಿ ಆಪ್ತ ಮೂಲಗಳ ಹೇಳಿಕೆ”
“ಏಷ್ಯಾ ಕಪ್ ಟ್ರೋಫಿ ಇನ್ನೂ ದುಬೈನಲ್ಲಿರುವ ಎಸಿಸಿ ಕಚೇರಿಯಲ್ಲಿದೆ. ಮೊಹ್ಸಿನ್ ನಖ್ವಿ ಅವರ ಸ್ಪಷ್ಟ ಸೂಚನೆಯಂತೆ, ಅವರ ಅನುಮೋದನೆ ಮತ್ತು ವೈಯಕ್ತಿಕ ಉಪಸ್ಥಿತಿಯಿಲ್ಲದೆ ಅದನ್ನು ಯಾರಿಗೂ ವರ್ಗಾಯಿಸುವಂತಿಲ್ಲ. ಭಾರತ ತಂಡ ಅಥವಾ ಬಿಸಿಸಿಐಗೆ ವೈಯಕ್ತಿಕವಾಗಿ ಮಾತ್ರ ಟ್ರೋಫಿಯನ್ನು ಹಸ್ತಾಂತರಿಸಬೇಕು ಎಂಬುದು ನಖ್ವಿ ಅವರ ಸ್ಪಷ್ಟ ನಿಲುವು,” ಎಂದು ಅವರ ಆಪ್ತ ಮೂಲಗಳು ಪಿಟಿಐಗೆ ತಿಳಿಸಿವೆ.
ನಖ್ವಿ ಮೇಲೆ ದೀರ್ಘಕಾಲೀನ ಪರಿಣಾಮ?
ಈ ವಿವಾದವು ಪಿಸಿಬಿ ಮತ್ತು ನಖ್ವಿ ಅವರ ಮೇಲೆ ದೀರ್ಘಕಾಲೀನ ಪರಿಣಾಮ ಬೀರುವ ಸಾಧ್ಯತೆಯಿದೆ. ಮುಂದಿನ ತಿಂಗಳು ನಡೆಯಲಿರುವ ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಸಭೆಯಲ್ಲಿ ಬಿಸಿಸಿಐ ಈ ವಿಷಯವನ್ನು ಪ್ರಸ್ತಾಪಿಸಲಿದೆ. ಒಂದು ವೇಳೆ ಬಿಸಿಸಿಐ ಅವಿಶ್ವಾಸ ನಿರ್ಣಯ ಮಂಡಿಸಿದರೆ, ನಖ್ವಿ ಅವರನ್ನು ವಿಶ್ವ ಕ್ರಿಕೆಟ್ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನದಿಂದ ತೆಗೆದುಹಾಕುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ.