ನವದೆಹಲಿ : ಅತ್ಯಂತ ಮಹತ್ವದ ನಿರ್ಧಾರವೊಂದರಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಆರಂಭವಾಗಿ ನಾಲ್ಕು ವರ್ಷಗಳ ನಂತರ ಅಲ್ಲಿನ ರಾಜಧಾನಿ ಕಾಬೂಲ್‌ನಲ್ಲಿ ತನ್ನ ರಾಯಭಾರಿ ಕಚೇರಿಯನ್ನು ಮತ್ತೆ ತೆರೆಯಲು ಭಾರತ ನಿರ್ಧರಿಸಿದೆ. ಇದು ತಾಲಿಬಾನ್ ಸರ್ಕಾರದೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಪೂರ್ಣ ಪ್ರಮಾಣದಲ್ಲಿ ಪುನಃಸ್ಥಾಪಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.
ಶುಕ್ರವಾರ ನವದೆಹಲಿಯಲ್ಲಿ ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರೊಂದಿಗೆ ನಡೆದ ದ್ವಿಪಕ್ಷೀಯ ಸಭೆಯಲ್ಲಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಈ ಘೋಷಣೆ ಮಾಡಿದರು.

ರಾಜತಾಂತ್ರಿಕ ಸಂಬಂಧ ವೃದ್ಧಿಗೆ ಹೊಸ ಅಧ್ಯಾಯ
2021ರ ಆಗಸ್ಟ್‌ನಲ್ಲಿ ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಅಧಿಕಾರವನ್ನು ವಶಪಡಿಸಿಕೊಂಡ ನಂತರ, ಭಾರತವು ಕಾಬೂಲ್‌ನಲ್ಲಿರುವ ತನ್ನ ರಾಯಭಾರಿ ಕಚೇರಿ ಮತ್ತು ಇತರ ದೂತಾವಾಸಗಳನ್ನು ಮುಚ್ಚಿತ್ತು. ಅಂದಿನಿಂದ, ಭಾರತವು ಅಲ್ಲಿ ಕೇವಲ ತಾಂತ್ರಿಕ ಕಾರ್ಯಾಚರಣೆಯ ತಂಡವನ್ನು ನಿರ್ವಹಿಸುತ್ತಿತ್ತು. ಇದೀಗ, ಈ ತಾಂತ್ರಿಕ ತಂಡವನ್ನೇ ಪೂರ್ಣ ಪ್ರಮಾಣದ ರಾಯಭಾರ ಕಚೇರಿಯಾಗಿ ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ ಎಂದು ಜೈಶಂಕರ್ ತಿಳಿಸಿದರು. “ಅಫ್ಘಾನಿಸ್ತಾನದ ಸಾರ್ವಭೌಮತೆ, ಪ್ರಾದೇಶಿಕ ಸಮಗ್ರತೆ ಮತ್ತು ಸ್ವಾತಂತ್ರ್ಯಕ್ಕೆ ಭಾರತ ಸಂಪೂರ್ಣ ಬದ್ಧವಾಗಿದೆ. ನಮ್ಮ ನಡುವಿನ ನಿಕಟ ಸಹಕಾರವು ನಿಮ್ಮ ರಾಷ್ಟ್ರೀಯ ಅಭಿವೃದ್ಧಿಗೆ ಹಾಗೂ ಪ್ರಾದೇಶಿಕ ಸ್ಥಿರತೆಗೆ ಕೊಡುಗೆ ನೀಡುತ್ತದೆ,” ಎಂದು ಜೈಶಂಕರ್ ಸಭೆಯಲ್ಲಿ ಹೇಳಿದ್ದಾರೆ.
ತಾಲಿಬಾನ್ ಸರ್ಕಾರ ಅಧಿಕಾರ ವಹಿಸಿಕೊಂಡ ನಂತರ ಭಾರತಕ್ಕೆ ಭೇಟಿ ನೀಡುತ್ತಿರುವ ಮೊದಲ ಉನ್ನತ ಮಟ್ಟದ ಅಧಿಕಾರಿ ಅಮೀರ್ ಖಾನ್ ಮುತ್ತಕಿ ಆಗಿದ್ದಾರೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಿಂದ ತಾತ್ಕಾಲಿಕ ಪ್ರಯಾಣ ವಿನಾಯಿತಿ ಪಡೆದು ಅವರು ಭಾರತಕ್ಕೆ ಆಗಮಿಸಿದ್ದಾರೆ. ಸಭೆಯಲ್ಲಿ ಜೈಶಂಕರ್ ಅವರು, “ನೆರೆಯ ರಾಷ್ಟ್ರವಾಗಿ ಮತ್ತು ಅಫ್ಘಾನಿಸ್ತಾನ ಜನರ ಹಿತೈಷಿಯಾಗಿ, ಭಾರತವು ನಿಮ್ಮ ಅಭಿವೃದ್ಧಿ ಮತ್ತು ಪ್ರಗತಿಯಲ್ಲಿ ಆಳವಾದ ಆಸಕ್ತಿಯನ್ನು ಹೊಂದಿದೆ” ಎಂದು ಹೇಳಿದರು. ಗಡಿಯಾಚೆಗಿನ ಭಯೋತ್ಪಾದನೆಯು ಉಭಯ ದೇಶಗಳಿಗೆ ಸಮಾನವಾದ ಆತಂಕದ ವಿಷಯವಾಗಿದೆ ಎಂದು ಪರೋಕ್ಷವಾಗಿ ಪಾಕಿಸ್ತಾನದತ್ತ ಬೊಟ್ಟು ಮಾಡಿ ತೋರಿಸಿದರು. ಭಾರತವು ಅಫ್ಘಾನಿಸ್ತಾನಕ್ಕೆ ನೀಡುತ್ತಿರುವ ಮಾನವೀಯ ನೆರವನ್ನು ಮುಂದುವರಿಸುವುದಾಗಿ ಜೈಶಂಕರ್ ಭರವಸೆ ನೀಡಿದರು. ಈ ಹಿಂದೆ ಪಹಲ್ಗಾಮ್ ಮೇಲಿನ ಭಯೋತ್ಪಾದಕ ದಾಳಿ ಮತ್ತು ಅಫ್ಘಾನಿಸ್ತಾನದ ಭೂಕಂಪದ ಸಂದರ್ಭಗಳಲ್ಲಿ ಭಾರತ ನೀಡಿದ ಬೆಂಬಲವನ್ನು ಅವರು ಸ್ಮರಿಸಿದರು.
ಪಾಕ್ ಉಗ್ರರಿಗೆ ಮುತ್ತಕಿ ಪರೋಕ್ಷ ಸಂದೇಶ
ಇನ್ನೊಂದೆಡೆ, ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರು ಭಾರತದೊಂದಿಗಿನ ಸಂಬಂಧವನ್ನು ಬಲಪಡಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಭಾರತವನ್ನು “ಆಪ್ತ ಸ್ನೇಹಿತ” ಎಂದು ಬಣ್ಣಿಸಿದ ಅವರು, ಪರಸ್ಪರ ಗೌರವ, ವ್ಯಾಪಾರ ಮತ್ತು ಜನರ ನಡುವಿನ ಬಾಂಧವ್ಯವನ್ನು ಆಧರಿಸಿದ ಸಂಬಂಧವನ್ನು ನಮ್ಮ ಸರ್ಕಾರ ಬಯಸುತ್ತದೆ ಎಂದು ಹೇಳಿದ್ದಾರೆ.
ಸಭೆಯಲ್ಲಿ ಮಾತನಾಡಿದ ಮುತ್ತಕಿ, “ಇತ್ತೀಚೆಗೆ ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೂಕಂಪದ ಸಂದರ್ಭದಲ್ಲಿ ಸ್ಪಂದಿಸಿದ ಮೊದಲ ರಾಷ್ಟ್ರ ಭಾರತ. ನಾವು ಭಾರತವನ್ನು ಆಪ್ತ ಸ್ನೇಹಿತನಾಗಿ ನೋಡುತ್ತೇವೆ” ಎಂದು ತಿಳಿಸಿದರು. ಇದೇ ವೇಳೆ ತಮ್ಮ ದೆಹಲಿ ಭೇಟಿಯ ಬಗ್ಗೆ ಸಂತಸ ವ್ಯಕ್ತಪಡಿಸಿ, “ಈ ಭೇಟಿಯು ಉಭಯ ದೇಶಗಳ ನಡುವಿನ ತಿಳುವಳಿಕೆಯನ್ನು ಹೆಚ್ಚಿಸುತ್ತದೆ ಎಂದರಲ್ಲದೆ, ನಮ್ಮ ನೆಲವನ್ನು ಇತರರ ವಿರುದ್ಧ ಬಳಸಲು ಯಾವುದೇ ಗುಂಪಿಗೆ ನಾವು ಅವಕಾಶ ನೀಡುವುದಿಲ್ಲ,” ಎಂದು ಅವರು ಸ್ಪಷ್ಟಪಡಿಸಿದರು. ಈ ಮೂಲಕ ಪಾಕ್ ಮೂಲದ ಉಗ್ರರಿಗೆ ನಮ್ಮಲ್ಲಿ ನೆಲೆ ಇಲ್ಲ ಎಂಬ ಸಂದೇಶವನ್ನೂ ಮುತ್ತಕಿ ಅವರು ನೀಡಿದ್ದಾರೆಯ