ಬೆಂಗಳೂರು : ಮುಡಾ ಪ್ರಕರಣದಲ್ಲಿ ತನಿಖಾಧಿಕಾರಿಯಾಗಿರುವ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಉದೇಶ್ ಅವರ ಬದಲಾವಣೆ ಕೋರಿ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ. ಜೊತೆಗೆ ಮುಡಾ ಪ್ರಕರಣದಲ್ಲಿ ತನಿಖೆ ಪೂರ್ಣಗೊಳಿಸಲು ಲೋಕಾಯುಕ್ತ ಪೊಲೀಸರಿಗೆ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು ಮತ್ತೆ 2 ತಿಂಗಳ ಗಡುವು ನೀಡಿದ್ದಾರೆ.
ಕಳೆದ 6 ತಿಂಗಳಿಂದ ತನಿಖೆಯಲ್ಲಿ ಪ್ರಗತಿ ಆಗದ ಹಿನ್ನೆಲೆ ಅರ್ಜಿದಾರರು ಬಿ ರಿಪೋರ್ಟ್ ಸಲ್ಲಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಈ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿ, ಇಂದಿಗೆ ಆದೇಶ ಕಾಯ್ದಿರಿಸಿತ್ತು. ಆದೇಶದಲ್ಲಿ 2 ತಿಂಗಳ ಒಳಗಾಗಿ ತನಿಖೆಯನ್ನು ಸಂಪೂರ್ಣಗೊಳಿಸಿ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಬೇಕು. ಹೆಚ್ಚುವರಿಯಾಗಿ ಕಾಲಾವಕಾಶ ಕೋರುವಂತಿಲ್ಲ ಎಂದು ನ್ಯಾಯಾಲಯ ಸೂಚಿಸಿದೆ.
ಇನ್ನು ಲೋಕಾಯುಕ್ತ ಪೊಲೀಸರು ತನಿಖೆಯ ನೆಪದಲ್ಲಿ ಕಾಲಹರಣ ಮಾಡುತ್ತಾ ಇದ್ದಾರೆ. ಹೀಗಾಗಿ ಬಿ ರಿಪೋರ್ಟ್‌ಗೆ ತೀರ್ಮಾನ ಮಾಡುವಂತೆ ಅರ್ಜಿ ಸಲ್ಲಿಸಲಾಗಿತ್ತು. ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಲಯ ನವೆಂಬರ್ 15ಕ್ಕೆ ವಿಚಾರಣೆ ಮುಂದೂಡಿದ್ದು, ತನಿಖಾಧಿಕಾರಿ ಬದಲಾವಣೆ ಮಾಡುವಂತೆ ಕೋರಿದ್ದ ಮಧ್ಯಂತರ ಅರ್ಜಿಯನ್ನು ನ್ಯಾಯಾಲಯ ಇದೇ ವೇಳೆ ವಜಾ ಮಾಡಿದೆ.