ಕಾನ್ಪುರ: ಭಾರತ ‘ಎ’ ತಂಡದ ವಿರುದ್ಧದ ಏಕದಿನ ಸರಣಿಗಾಗಿ ಭಾರತ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ‘ಎ’ ತಂಡದಲ್ಲಿ ಆರೋಗ್ಯದ ಆತಂಕ ಎದುರಾಗಿದೆ. ತಂಡದ ನಾಯಕ ಸೇರಿದಂತೆ ನಾಲ್ವರು ಆಟಗಾರರು ಹೊಟ್ಟೆಯ ಸೋಂಕಿನಿಂದ ಅಸ್ವಸ್ಥಗೊಂಡಿದ್ದು, ಒಬ್ಬ ಆಟಗಾರನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಭಾರತ ‘ಎ’ ಮತ್ತು ಆಸ್ಟ್ರೇಲಿಯಾ ‘ಎ’ ತಂಡಗಳ ನಡುವೆ ಮೂರು ಪಂದ್ಯಗಳ ಅನಧಿಕೃತ ಏಕದಿನ ಸರಣಿ ನಡೆಯುತ್ತಿದೆ. ಮೊದಲ ಪಂದ್ಯವನ್ನು ಭಾರತ ‘ಎ’ ಗೆದ್ದುಕೊಂಡರೆ, ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ‘ಎ’ ತಂಡವು 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ ಸರಣಿಯನ್ನು 1-1 ರಿಂದ ಸಮಬಲಗೊಳಿಸಿದೆ. ಇದರ ನಡುವೆಯೇ ಆಸೀಸ್ ಪಾಳಯದಲ್ಲಿ ಈ ಆತಂಕಕಾರಿ ಘಟನೆ ನಡೆದಿದೆ.
“ಏನಿದು ಸಮಸ್ಯೆ”?
ತಂಡದ ವೇಗದ ಬೌಲರ್ ಹೆನ್ರಿ ಥಾರ್ನ್‌ಟನ್ ಅವರ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಅವರನ್ನು ಕಾನ್ಪುರದ ರೀಜೆನ್ಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಸ್ವಸ್ಥಗೊಂಡಿದ್ದ ಉಳಿದ ಮೂವರು ಆಟಗಾರರಿಗೆ ಚಿಕಿತ್ಸೆ ನೀಡಿ, ವೈದ್ಯಕೀಯ ಪರೀಕ್ಷೆಗಳ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಆಟಗಾರರು ತಂಗಿದ್ದ ಹೋಟೆಲ್‌ನಲ್ಲಿ ಸೇವಿಸಿದ ಆಹಾರದಿಂದ ಈ ಸೋಂಕು ತಗುಲಿದೆ ಎಂದು ಶಂಕಿಸಲಾಗಿದೆಯಾದರೂ, ತಂಡದ ಆಡಳಿತ ಮಂಡಳಿ ಅಥವಾ ಆಸ್ಪತ್ರೆಯ ಅಧಿಕಾರಿಗಳು ಇದನ್ನು ಅಧಿಕೃತವಾಗಿ ದೃಢಪಡಿಸಿಲ್ಲ.
ತಂಡದ ಸ್ಥಳೀಯ ವ್ಯವಸ್ಥಾಪಕರ ಪ್ರಕಾರ, ನಾಲ್ವರು ಆಟಗಾರರನ್ನು ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಮೂವರ ವರದಿಗಳು ಸಾಮಾನ್ಯವಾಗಿ ಬಂದಿದ್ದರಿಂದ ಅವರನ್ನು ಹೋಟೆಲ್‌ಗೆ ವಾಪಸ್ ಕಳುಹಿಸಲಾಯಿತು. ಆದರೆ, ಥಾರ್ನ್‌ಟನ್ ಅವರಲ್ಲಿ ತೀವ್ರ ಸೋಂಕಿನ ಲಕ್ಷಣಗಳು ಕಂಡುಬಂದಿದ್ದರಿಂದ ಅವರನ್ನು ನಿಗಾದಲ್ಲಿ ಇರಿಸಲಾಗಿತ್ತು. ನಂತರ ಅವರ ಸ್ಥಿತಿ ಸುಧಾರಿಸಿದ ಮೇಲೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
“ಅಧಿಕಾರಿಗಳ ಪ್ರತಿಕ್ರಿಯೆ ಮತ್ತು ಮುನ್ನೆಚ್ಚರಿಕೆ”
ಈ ಘಟನೆಯ ನಂತರ, ಆಸ್ಟ್ರೇಲಿಯಾ ತಂಡದ ಆಡಳಿತ ಮಂಡಳಿಯು ಮುನ್ನೆಚ್ಚರಿಕಾ ಕ್ರಮವಾಗಿ ಆಟಗಾರರ ಆಹಾರ ಪಟ್ಟಿಯನ್ನು ಬದಲಾಯಿಸಿದೆ. ಸ್ಥಳೀಯ ಆಹಾರ ಮತ್ತು ನೀರನ್ನು ಸೇವಿಸದಂತೆ ಆಟಗಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಇತ್ತ, ಆಹಾರ ಇಲಾಖೆಯ ಅಧಿಕಾರಿಗಳು ಹೋಟೆಲ್‌ನ ಅಡುಗೆಮನೆಯಿಂದ ಆಹಾರದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಿದ್ದು, ಯಾವುದೇ ಕಲಬೆರಕೆ ಅಥವಾ ನ್ಯೂನತೆ ಕಂಡುಬಂದಿಲ್ಲ ಎಂದು ವರದಿ ಮಾಡಿದ್ದಾರೆ. ಹೋಟೆಲ್ ಆಡಳಿತವು ತಮ್ಮ ಆಹಾರಕ್ಕೂ ಆಟಗಾರರ ಅನಾರೋಗ್ಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದು, ಬದಲಾದ ಹವಾಮಾನವೇ ಇದಕ್ಕೆ ಕಾರಣವಿರಬಹುದು ಎಂದು ತಿಳಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ, “ಆಟಗಾರರು ತಂಗಿದ್ದ ಹೋಟೆಲ್ ಕಾನ್ಪುರದ ಅತ್ಯುತ್ತಮ ಹೋಟೆಲ್‌ಗಳಲ್ಲಿ ಒಂದಾಗಿದೆ. ಒಂದು ವೇಳೆ ಆಹಾರವೇ ಕಾರಣವಾಗಿದ್ದರೆ, ಎಲ್ಲಾ ಆಟಗಾರರು ಅಸ್ವಸ್ಥಗೊಳ್ಳಬೇಕಿತ್ತು. ಈ ಬಗ್ಗೆ ಎಚ್ಚರಿಕೆಯಿಂದ ತನಿಖೆ ನಡೆಸಬೇಕಿದೆ,” ಎಂದು ಹೇಳಿದ್ದಾರೆ.
ಈ ಆರೋಗ್ಯದ ಸಮಸ್ಯೆಯು ಆಸ್ಟ್ರೇಲಿಯಾ ‘ಎ’ ತಂಡದ ಸಿದ್ಧತೆಗೆ ತಾತ್ಕಾಲಿಕವಾಗಿ ಅಡ್ಡಿಯಾಗಿದ್ದರೂ, ಮುಂದಿನ ಪಂದ್ಯದ ವೇಳೆಗೆ ಎಲ್ಲಾ ಆಟಗಾರರು ಸಂಪೂರ್ಣವಾಗಿ ಚೇತರಿಸಿಕೊಳ್ಳಲಿದ್ದಾರೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.