ತಿರುವನಂತಪುರ : ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಸಂಭವಿಸಿದ 11 ಮಕ್ಕಳ ಸಾವಿಗೆ ಕಾರಣ ಎಂದು ಶಂಕಿಸಲಾದ ‘ಕೋಲ್ಮೀಫ್” ಕೆಮ್ಮಿನ ಸಿರಪ್ ಮಾರಾಟವನ್ನು ನಿಷೇಧ ಮಾಡಲಾಗಿದೆ ಎಂದು ಕೇರಳ ರಾಜ್ಯದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
‘ಕೋಲ್ಮೀಫ್ ಸಿರಪ್‌ನ ಒಂದು ಬ್ಯಾಚ್ ನಲ್ಲಿ ದೋಷ ಕಂಡುಬಂದಿರುವ ಬಗ್ಗೆ ಇತರ ರಾಜ್ಯಗಳ ವರದಿಗಳನ್ನು ಆಧರಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ರಾಜ್ಯ ಔಷಧ ನಿಯಂತ್ರಣ ಇಲಾಖೆಯ ವಿಚಾರಣೆಯ ಸಂದರ್ಭದಲ್ಲಿ ರಾಜ್ಯದಲ್ಲಿ ನಿರ್ದಿಷ್ಟ ಬ್ಯಾಚ್‌ನ ಔಷಧ ಮಾರಾಟವಾಗಿಲ್ಲ’ ಎಂದು ಜಾರ್ಜ್ ಸ್ಪಷ್ಟಪಡಿಸಿದ್ದಾರೆ.
“ಆದಾಗ್ಯೂ, ಸುರಕ್ಷತೆಯ ದೃಷ್ಟಿಯಿಂದ ‘ಕೋಲ್ಮೀಫ್’ ವಿತರಣೆ ಮತ್ತು ಮಾರಾಟವನ್ನು ಸಂಪೂರ್ಣವಾಗಿ ನಿಲ್ಲಿಸುವಂತೆ ವಿತರಕರು ಮತ್ತು ಅಂಗಡಿ ಮಾಲೀಕರಿಗೆ ಸೂಚನೆ ನೀಡಲಾಗಿದೆ. ಜತೆಗೆ, ತಪಾಸಣೆ ವೇಳೆ ಸಿಕ್ಕಿರುವ ಕೋಲ್ಟಿಫ್ ಸಿರಪ್‌ನ ಮಾದರಿಗಳನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.
‘ಕೆಮ್ಮು ಹಾಗೂ ಶೀತಕ್ಕೆ ಸಂಬಂಧಿಸಿದಂತೆ ಎರಡು ವರ್ಷದೊಳಗಿನ ಮಕ್ಕಳಿಗೆ ಔಷಧ ಶಿಫಾರಸು ಮಾಡಬಾರದು. ಐದು ವರ್ಷದೊಳಗಿನ ಮಕ್ಕಳಿಗೂ ಸಾಮಾನ್ಯವಾಗಿ ಅಗತ್ಯ ಇರುವುದಿಲ್ಲ. ಅತಿ ಅಗತ್ಯವಾದರೆ ಮಾತ್ರ ಸೂಕ್ತ ಪ್ರಮಾಣದಲ್ಲಿ ಕಡಿಮೆ ಅವಧಿಗೆ ಒದಗಿಸಬೇಕು’ ಎಂಬ ಕೇಂದ್ರ ಔಷಧ ನಿಯಂತ್ರಣ ಗುಣಮಟ್ಟ ಸಂಸ್ಥೆಯ (ಸಿಡಿಎಸ್‌ಸಿಒ) ಮಾರ್ಗಸೂಚಿಗಳನ್ನು ತಪ್ಪದೆ ಪಾಲಿಸುವಂತೆ ನಿರ್ದೇಶನ ನೀಡಲಾಗಿದೆ’ ಎಂದೂ ಅವರು ಮಾಹಿತಿ ನೀಡಿದ್ದಾರೆ.