ಬೆಂಗಳೂರು : ವಾತವರಣದಲ್ಲಿ ಏರುಪೇರು ಆಗುತ್ತಿದ್ದಂತೆ ರಾಜ್ಯದಲ್ಲಿ ಸದ್ದಿಲ್ಲದೇ ಸಾಂಕ್ರಾಮಿಕ ಸೋಂಕುಗಳು ಏರಿಕೆಯಾತ್ತಿವೆ. ಆದರಲ್ಲೂ ಮಾರಣಾಂತಿಕ ಡೆಂಘೀ ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಇದೀಗ ಬೆಂಗಳೂರಿನಲ್ಲಿ ಡೆಂಘೀ ಸೋಂಕಿತರ ಸಂಖ್ಯೆ ಹತ್ತು ಸಾವಿರ ಗಡಿ ದಾಟಿದ್ದು, ನಗರದಲ್ಲಿ ಈವರೆಗೆ 10,381 ಶಂಕಿತ ಡೆಂಘೀ ಪ್ರಕರಣ ಪತ್ತೆಯಾಗಿದೆ. ಈ ಪೈಕಿ 7,408 ಮಂದಿ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿದ್ದು, ಈ ವೇಳೆ 2,478 ಮಂದಿಯಲ್ಲಿ ಡೆಂಘೀ ಸೋಂಕು ದೃಢವಾಗಿದೆ.
ಬೆಂಗಳೂರು ಹೊರತುಪಡಿಸಿ ರಾಜ್ಯಾದಾದ್ಯಂತ 2615 ಪ್ರಕರಣಗಳು ದೃಢಪಟ್ಟಿದ್ದು, ಈ ಸೋಂಕಿಗೆ ಈಡೀಸ್ ಈಜಿಪ್ಟೈ ಎಂಬ ಸೊಳ್ಳೆ ಕಡಿತವೇ ಕಾರಣವಾಗಿದೆ. ನಿಂತ ನೀರಲ್ಲಿ ಬೆಳೆಯುವ ಈ ಡೇಂಜರಸ್ ಸೊಳ್ಳೆ ಕಚ್ಚುವುದರಿಂದ ಡೆಂಘೀ ಗುಣಲಕ್ಷಣಗಳು ಕಂಡು ಬರುತ್ತಿವೆ.
ವಿಪರೀತ ಜ್ವರ, ತಲೆನೋವು, ಮೈಕೈ ನೋವು,ಕೀಲುನೋವು, ವಾಂತಿ-ವಾಕರಿಕೆ,ಕಣ್ಣುಗಳ ಹಿಂಭಾಗದಲ್ಲಿ ನೋವು, ಊದಿಕೊಂಡ ಗ್ರಂಥಿಗಳು ಈ ಸೋಂಕಿನ ಲಕ್ಷಣಗಳಾಗಿರುತ್ತವೆ. ಇಂತಹ ಲಕ್ಷಣಗಳು ಕಂಡು ಬಂದರೆ ತಕ್ಷಣ ಸಮೀಪದ ಪಾಲಿಕೆ ಆಸ್ಪತ್ರೆಗಳಿಗೆ ತೆರಳಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವಂತೆ ಆರೋಗ್ಯಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.



















