ಅಹಮದಾಬಾದ್: ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಬೌಲಿಂಗ್‌ನಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿ, ಬ್ಯಾಟಿಂಗ್‌ಗೆ ವೇದಿಕೆ ಸಿದ್ಧಪಡಿಸಿತ್ತು. ಆದರೆ, ಈ ಸುವರ್ಣಾವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲರಾದ ಯುವ ಬ್ಯಾಟ್ಸ್‌ಮನ್ ಸಾಯಿ ಸುದರ್ಶನ್, ಒಂದಂಕಿಯ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದ್ದಾರೆ. ಅವರ ಈ ವೈಫಲ್ಯವು ಕ್ರಿಕೆಟ್ ಅಭಿಮಾನಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, “ಇವರ ಬದಲು ಕರುಣ್ ನಾಯರ್ ಆಡಿದ್ದರೆ, ಈ ಪಿಚ್‌ನಲ್ಲಿ ತ್ರಿಶತಕ ಸಿಡಿಸುತ್ತಿದ್ದರು,” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳ ಸುರಿಮಳೆಗೈದಿದ್ದಾರೆ.
ಪ್ರಾಬಲ್ಯದ ದಿನದಾಟದಲ್ಲಿ ಸುದರ್ಶನ್ ವೈಫಲ್ಯ
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆರಂಭವಾದ ಮೊದಲ ಟೆಸ್ಟ್‌ನಲ್ಲಿ, ಭಾರತೀಯ ಬೌಲರ್‌ಗಳ ಮಾರಕ ದಾಳಿಗೆ ತತ್ತರಿಸಿದ ವೆಸ್ಟ್ ಇಂಡೀಸ್, ಕೇವಲ 162 ರನ್‌ಗಳಿಗೆ ಸರ್ವಪತನ ಕಂಡಿತು. ಬಳಿಕ, ಮೊದಲ ಇನಿಂಗ್ಸ್ ಆರಂಭಿಸಿದ ಭಾರತ ತಂಡ, ಆರಂಭಿಕರಾದ ಯಶಸ್ವಿ ಜೈಸ್ವಾಲ್ (40) ಮತ್ತು ಕೆ.ಎಲ್. ರಾಹುಲ್ ಅವರ 68 ರನ್‌ಗಳ ಜೊತೆಯಾಟದಿಂದ ಉತ್ತಮ ಆರಂಭ ಪಡೆಯಿತು. ಜೈಸ್ವಾಲ್ ಔಟಾದ ನಂತರ, 3ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಸಾಯಿ ಸುದರ್ಶನ್ ಮೇಲೆ ಹೆಚ್ಚಿನ ನಿರೀಕ್ಷೆಗಳಿದ್ದವು. ಆದರೆ, ಅವರು ರಾಸ್ಟನ್ ಚೇಸ್ ಅವರ ಸ್ಪಿನ್ ಮೋಡಿಗೆ ನಲುಗಿ, ಕೇವಲ 7 ರನ್ ಗಳಿಸಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು.
ನಿರಂತರ ವೈಫಲ್ಯ ಮತ್ತು ಅಭಿಮಾನಿಗಳ ಆಕ್ರೋಶ
ಐಪಿಎಲ್‌ನಲ್ಲಿ ಗುಜರಾತ್ ಟೈಟನ್ಸ್ ಪರ ಅಮೋಘ ಪ್ರದರ್ಶನ ನೀಡಿ ಗಮನಸೆಳೆದಿದ್ದರೂ, ಸಾಯಿ ಸುದರ್ಶನ್ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಲಯ ಕಂಡುಕೊಳ್ಳಲು ವಿಫಲರಾಗುತ್ತಿದ್ದಾರೆ. ಇದುವರೆಗೆ ಆಡಿದ ಏಳು ಟೆಸ್ಟ್ ಇನಿಂಗ್ಸ್‌ಗಳಲ್ಲಿ, ಅವರು ಕೇವಲ 21.00ರ ಸರಾಸರಿಯಲ್ಲಿ 147 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ನಿರಂತರ ವೈಫಲ್ಯವೇ ಅಭಿಮಾನಿಗಳ ಆಕ್ರೋಶಕ್ಕೆ ಮುಖ್ಯ ಕಾರಣವಾಗಿದೆ.
ಇತ್ತೀಚೆಗಷ್ಟೇ ಇಂಗ್ಲೆಂಡ್ ಪ್ರವಾಸದಲ್ಲಿ ಟೆಸ್ಟ್ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದ ಕರುಣ್ ನಾಯರ್ ಅವರನ್ನು, ವೆಸ್ಟ್ ಇಂಡೀಸ್ ಸರಣಿಯಿಂದ ಕೈಬಿಡಲಾಗಿತ್ತು. “ಈ ರೀತಿಯ ಬೌಲಿಂಗ್ ದಾಳಿಯ ವಿರುದ್ಧ, ಅಹಮದಾಬಾದ್‌ನಂತಹ ಪಿಚ್‌ನಲ್ಲಿ ಕರುಣ್ ಆಡಿದ್ದರೆ, ಖಂಡಿತ ತ್ರಿಶತಕ ಬಾರಿಸುತ್ತಿದ್ದರು. ಸುದರ್ಶನ್‌ಗೆ ಮತ್ತೊಂದು ಅವಕಾಶ ನೀಡುವ ಬದಲು, ಕರುಣ್ ನಾಯರ್ ಅವರಿಗೆ ಮಣೆ ಹಾಕಬೇಕಿತ್ತು,” ಎಂದು ಅಭಿಮಾನಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಅರ್ಧಶತಕ ಸಿಡಿಸಿ ಮಿಂಚಿದ ರಾಹುಲ್
ಒಂದೆಡೆ ಯುವ ಆಟಗಾರರು ವೈಫಲ್ಯ ಅನುಭವಿಸುತ್ತಿದ್ದರೆ, ಮತ್ತೊಂದೆಡೆ ಕನ್ನಡಿಗ ಕೆ.ಎಲ್. ರಾಹುಲ್ ತಮ್ಮ ಜವಾಬ್ದಾರಿಯುತ ಆಟವನ್ನು ಮುಂದುವರೆಸಿದ್ದಾರೆ. ರೋಹಿತ್ ಶರ್ಮಾ ಅವರ ನಿವೃತ್ತಿಯ ನಂತರ ಆರಂಭಿಕನಾಗಿ ಬಡ್ತಿ ಪಡೆದಿರುವ ರಾಹುಲ್, ಇಂಗ್ಲೆಂಡ್ ಪ್ರವಾಸದ ಲಯವನ್ನೇ ಇಲ್ಲಿಯೂ ಮುಂದುವರೆಸಿ, 114 ಎಸೆತಗಳಲ್ಲಿ 6 ಬೌಂಡರಿಗಳೊಂದಿಗೆ ಅಜೇಯ 53 ರನ್ ಗಳಿಸಿ, ಮೊದಲ ದಿನದಾಟದಂತ್ಯಕ್ಕೆ ತಂಡಕ್ಕೆ ಆಸರೆಯಾಗಿದ್ದಾರೆ.