ಬೆಂಗಳೂರು : ರಾಜ್ಯದಲ್ಲಿ ಈ ವರ್ಷ ಮುಂಗಾರು ಮಳೆ ಅಬ್ಬರ ಜೋರಾಗಿದೆ. ಭೀಮಾ ನದಿಯ ಪ್ರವಾಹದಿಂದ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ನೆರೆ ಹಾವಳಿ ಉಂಟಾಗಿದ್ದು, ಜನರು ಪ್ರವಾಹದಿಂದ ತತ್ತರಿಸುತ್ತಿದ್ದಾರೆ. ಈ ನಡುವೆ ರಾಜ್ಯದಲ್ಲಿ ನೆರೆ ಪಾಲಿಟಿಕ್ಸ್ ತೀವ್ರಗೊಂಡಿದ್ದು, ಸರ್ಕಾರದ ವಿರುದ್ಧ ವಿಪಕ್ಷಗಳ ಟೀಕೆಯೂ ತೀವ್ರಗೊಂಡಿದೆ.
ಈ ಮಧ್ಯೆ ಇಂದಿನಿಂದ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ನೆರೆ ಪರಿಸ್ಥಿತಿ ಪರಿಶೀಲನೆಗೆ ಮುಂದಾಗಿದ್ದಾರೆ. ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿನ ನೆರೆ ಸಂತ್ರಸ್ತರ ಪರಿಸ್ಥಿತಿ ಅವಲೋಕನ ನಡೆಸಲು ೨ ದಿನ ಆರ್. ಆಶೋಕ್ ಅವರು ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ.
ಇಂದು ಮತ್ತು ನಾಳೆ ಎರಡು ದಿನಗಳ ಕಾಲ ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಬಿಜೆಪಿ ಹಿರಿಯ ನಾಯಕರು ನೆರೆ ಸಂತ್ರಸ್ತರ ಪರಿಸ್ಥಿತಿ ಅವಲೋಕನ ನಡೆಸಲಿದ್ದು, ಬೆಳಗಾವಿ ಮತ್ತು ವಿಜಯಪುರ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಬಿಜೆಪಿ ನಿಯೋಗ ಭೇಟಿ ನೀಡಲಿದೆ. ಇಂದು ಬೈಲಹೊಂಗಲ ಕ್ಷೇತ್ರದ ನೇಸರಗಿ, ಹಿರೇಬಾಗೇವಾಡಿ ಹಾಗೂ ಚಿಕ್ಕೋಡಿ ಕ್ಷೇತ್ರದ ತೇಲಸಂಗ ಕ್ರಾಸ್ ಸುತ್ತಮುತ್ತಲಿನ ಗ್ರಾಮಗಳಿಗೆ ಭೇಟಿ ನೀಡಲಿರುವ ಬಿಜೆಪಿ ನಿಯೋಗ, ಬಳಿಕ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಹೂಡಲಿದೆ.
ಹಾಗೆಯೇ ನಾಳೆ ಇಂಡಿ ವಿಧಾನಸಭಾ ಕ್ಷೇತ್ರದ ಅಂಜುಟಗಿ, ಖೇಡಗಿ, ರೋಡಗಿ, ಮಿರಗಿ ಮತ್ತು ಸುತ್ತಮುತ್ತಲಿನ ಗ್ರಾಮಗಳಿಗೆ ಭೇಟಿ ನೀಡಿ ಅವಲೋಕನ ನಡೆಸಲಿದೆ. ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ನೇತೃತ್ವದಲ್ಲಿ ಒಂದು ಹಂತ ಪ್ರವಾಸ ನಡೆದಿದ್ದು, ಇಂದಿನಿಂದ ಬಿಜೆಪಿಯ 2ನೇ ನಿಯೋಗ ಭೇಟಿ ನೀಡುತ್ತಿದೆ.