ಬೆಂಗಳೂರು: ಪ್ರಸಿದ್ಧ ಭಾರತೀಯ ಇತಿಹಾಸಕಾರ, ಅಂಕಣಕಾರ ಮತ್ತು ಚಿಂತಕರಾದ ಡಾ. ರಾಮಚಂದ್ರ ಗುಹಾ ಅವರನ್ನು 2025ನೇ ಸಾಲಿನ ಮಹಾತ್ಮಗಾಂಧಿ ಸೇವಾ ಪ್ರಶಸ್ತಿ- ಕರ್ನಾಟಕಕ್ಕೆ ಕರ್ನಾಟಕ ಸರ್ಕಾರ ಆಯ್ಕೆ ಮಾಡಿದೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಪ್ರತಿ ವರ್ಷ ನೀಡಲಾಗುವ ಈ ಗೌರವಾನ್ವಿತ ಪ್ರಶಸ್ತಿಯನ್ನು, ಗಾಂಧೀಜಿಯವರ ಜೀವನ ಮೌಲ್ಯಗಳನ್ನು ಸಮಾಜದಲ್ಲಿ ಹರಡಲು ಮಹತ್ತರ ಕೊಡುಗೆ ನೀಡಿದ ವ್ಯಕ್ತಿ ಹಾಗೂ ಸಂಸ್ಥೆಗಳಿಗೆ ಪ್ರದಾನ ಮಾಡಲಾಗುತ್ತದೆ.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಜಯಂತಿಯನ್ನು ರಾಜ್ಯದಾದ್ಯಂತ ಅರ್ಥಪೂರ್ಣವಾಗಿ, ಜನಸಾಮಾನ್ಯರು, ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯಿಂದ ಆಚರಿಸಲು ರಾಜ್ಯ ಸರ್ಕಾರವು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಆಚರಣೆಯ ಅಂಗವಾಗಿ ಗಾಂಧೀಜಿಯವರ ತತ್ವ, ಮೌಲ್ಯ ಹಾಗೂ ಸಮಾಜಮುಖಿ ಚಿಂತನೆಗಳನ್ನು ಜನಮನಗಳಲ್ಲಿ ಬಿತ್ತುವಲ್ಲಿ ಮಹತ್ವದ ಪಾತ್ರವಹಿಸಿರುವ ಡಾ. ರಾಮಚಂದ್ರ ಗುಹಾ ಅವರನ್ನು ಈ ವರ್ಷದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಡಾ. ಗುಹಾ ಅವರು ಭಾರತದ ಸಮಕಾಲೀನ ಇತಿಹಾಸ, ರಾಜಕೀಯ ಚಳವಳಿಗಳು, ಪರಿಸರ ಹೋರಾಟಗಳು ಹಾಗೂ ಕ್ರಿಕೆಟ್ ಕುರಿತ ತಮ್ಮ ಅಧ್ಯಯನ ಮತ್ತು ಗ್ರಂಥ ರಚನೆಗಳ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ.
ಅವರ ಪ್ರಮುಖ ಕೃತಿಗಳು:
India After Gandhi (ಸ್ವಾತಂತ್ರ್ಯಾನಂತರ ಭಾರತದ ಇತಿಹಾಸ)
A Corner of a Foreign Field (ಭಾರತೀಯ ಕ್ರಿಕೆಟ್‌ನ ಸಾಮಾಜಿಕ ಇತಿಹಾಸ)
Gandhi Before India (ಮಹಾತ್ಮ ಗಾಂಧೀಜಿಯವರ ಜೀವನಚರಿತ್ರೆಯ ಮೊದಲ ಭಾಗ)
Gandhi: The Years That Changed the World (ಜೀವನಚರಿತ್ರೆಯ ಎರಡನೇ ಭಾಗ)
The Unquiet Woods (ತಳಸ್ಥರದ ಪರಿಸರ ಚಳವಳಿಗಳ ಅಧ್ಯಯನ)


















