ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದ ಮೇಲೆ ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ನಟ ದರ್ಶನ್ ಕನಿಷ್ಠ ಸೌಲಭ್ಯವೂ ಸಿಗುತ್ತಿಲ್ಲ ಎಂದು ಜೈಲಾಧಿಕಾರಿಗಳ ವಿರುದ್ಧ ಆರೋಪ ಮಾಡಿದ್ದಾರೆ. ನಿದ್ದೆ ಮಾಡಲು ಸರಿಯಾಗಿ ಹಾಸಿಗೆ, ದಿಂಬು ಇಲ್ಲ. ಅಲ್ಲದೆ ವಾಕಿಂಗ್ ಮಾಡಲು ಹೆಚ್ಚಿನ ಸ್ಥಳ ನೀಡಿಲ್ಲವೆಂದು ಆರೋಪಿಸಿದ್ದಾರೆ.
ಈಗಾಗಲೇ ಕೋರ್ಟ್ ಸೂಚನೆ ನೀಡಿದ್ದರು ನನಗೆ ಯಾವುದೇ ಸೌಲಭ್ಯ ನೀಡುತ್ತಿಲ್ಲ ಎಂದು ಜೈಲಾಧಿಕಾರಿಗಳ ವಿರುದ್ಧ ದಾಸ ಕೋರ್ಟ್ ಮೊರೆ ಹೋಗಿದ್ದಾರೆ. ಈ ಸಂಬಂಧ ಜೈಲಿನ ಸೂಪರಿಡೆಂಟ್ ಕೋರ್ಟ್ ಗೆ ರಿಪೋರ್ಟ್ ಸಲ್ಲಿಸಿದ್ದಾರೆ. 64ನೇ ಸಿಸಿಹೆಚ್ ನ್ಯಾಯಾಲಯದಲ್ಲಿಇಂದು ವಿಚಾರಣೆ ನಡೆದಿದ್ದು, ಜೈಲಿನಲ್ಲಿ ಸರಿಯಾದ ಸೌಲಭ್ಯ ಕೊಡುತ್ತಿಲ್ಲಎಂದು ದರ್ಶನ್ ಪರ ವಕೀಲ ಸುನಿಲ್ ಪ್ರಬಲವಾಗಿ ವಾದ ಮಂಡಿಸಿದ್ದಾರೆ.
ಜೈಲಿಗೆ ಎಷ್ಟು ವಿಐಪಿಗಳು ಹೋಗಿ ಬಂದರು. ಅವರಿಗೆ ಇದೇ ರೀತಿ ಸೆಕ್ಯುರಿಟಿ ಕೊಡುತಿದ್ದಾರಾ? ಎಂದು ದರ್ಶನ್ ಪರ ವಕೀಲ ಸುನೀಲ್ ಪ್ರಶ್ನಿಸಿದ್ದಾರೆ. ದರ್ಶನ್ ಗೆ ನಾವು ಚಿನ್ನದ ಮಂಚ ಕೇಳಿದಿವಾ? ಇವರು ಕೇವಲ ಲೋಟ, ತಟ್ಟೆ ಕೊಟ್ಟಿದ್ದಾರೆ. ದರ್ಶನ್ ಗೆ ಮಾತ್ರ ಯಾಕೆ ಇಷ್ಟೊಂದು ಸೆಕ್ಯೂರಿಟಿ. ಎಂದು ವಕೀಲರಾದ ಸುನೀಲ್ ಅಸಮಾಧಾನದಿಂದಲೇ ವಾದ ಮಂಡಿಸಿದ್ದಾರೆ.
ದರ್ಶನ್ ಗೆ ಕ್ವಾರಂಟೈನ್ ಸೆಲ್ ನಲ್ಲಿ ಇಟ್ಟಿದ್ದಾರೆ. ಬೇರೆ ಯಾರಿಗೂ ಈ ರೀತಿ ಕ್ವಾರಂಟೈನ್ ಸೆಲ್ ನಲ್ಲಿ ಇಟ್ಟಿಲ್ಲ. ದರ್ಶನ್ ಗೆ ಮಾತ್ರ ಯಾಕೆ ಕ್ವಾರಂಟೈನ್ ಸೆಲ್ ನಲ್ಲಿ ಇಟ್ಟಿದ್ದಾರೆ? ಕಾನೂನು ಎಂದರೆ ಎಲ್ಲರಿಗೂ ಸಹ ಒಂದೇ ಅಲ್ಲವಾ? ಸೆಲೆಬ್ರಿಟಿ ರಕ್ಷಣೆಗೆ ಕ್ರಮ ಎಂದೆಲ್ಲಾ ಹೇಳುತ್ತಿದ್ದಾರೆ. ಆದರೆ ಉಗ್ರರಿಗೆ ಇರಿಸುವ ಸೆಲ್ ನಲ್ಲಿ ಇಟ್ಟಿದ್ದಾರೆ ಎಂದು ದರ್ಶನ್ ಪರ ವಕೀಲ ಸುನಿಲ್ ವಾದಿಸಿದರು.
ದರ್ಶನ್ ಪರ ವಕೀಲ ಸುನಿಲ್ ಹಾಗೂ ಎಸ್‌ಪಿಪಿ ಪ್ರಸನ್ನಕುಮಾರ್ ವಾದ ಪ್ರತಿವಾದ ಆಲಿಸಿದ ನ್ಯಾಯಾದೀಶರು ಅ. 9ಕ್ಕೆ ಆದೇಶ ಕಾಯ್ದಿರಿಸಿದ್ದಾರೆ.