ಹುಬ್ಬಳ್ಳಿ: ಕಾಂಗ್ರೆಸ್ ಸರ್ಕಾರವು ಕಮಿಷನ್ ದಂಧೆಯಲ್ಲಿ ತೊಡಗಿ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದ್ದಾರೆ.
ಗುತ್ತಿಗೆದಾರರು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿರುವ ವಿಚಾರವಾಗಿ ಮಾತನಾಡಿದ, ಇದು ರಾಜ್ಯ ಸರ್ಕಾರದ ನಿಜ ಬಣ್ಣವನ್ನು ಬಯಲು ಮಾಡಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಅವೈಜ್ಞಾನಿಕ ಗ್ಯಾರಂಟಿಗಳನ್ನು ಮುಂದಿಟ್ಟು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಇದೀಗ ರಾಜ್ಯದ ಸಂಪತ್ತನ್ನೇ ಹಾಳು ಮಾಡಿದೆ. ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ದೋಚುತ್ತ ಅಂಧಪತನದತ್ತ ನೂಕುತ್ತಿದೆ ಎಂದು ಆರೋಪಿಸಿದ್ದಾರೆ.
ರಾಜ್ಯ ಸರ್ಕಾರ ಅವೈಜ್ಞಾನಿಕ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಅಭಿವೃದ್ಧಿಯನ್ನು ಸಂಪೂರ್ಣ ಹಳ್ಳಕ್ಕೆ ತಳ್ಳಿದೆ. ಅಲ್ಲದೇ, ಕೈಗೊಂಡಿರುವ ಕಾಮಗಾರಿಗಳ ಬಗೆಗಿನ ಮೊತ್ತವನ್ನೂ ಗುತ್ತಿಗೆದಾರರಿಗೆ ನೀಡದೇ ಅವರ ಜೀವನವನ್ನು ಕಷ್ಟಕ್ಕೆ ತಳ್ಳಿದೆ. ಅಭಿವೃದ್ಧಿ ಕಾಮಗಾರಿಗಳು ನಡೆದು ವರ್ಷಗಳೇ ಕಳೆದರೂ ಹಣ ನೀಡದೇ ಸತಾಯಿಸುತ್ತಿದೆ. ಕಮಿಷನ್ ದಂಧೆಯಲ್ಲಿ ತೊಡಗಿ ವ್ಯಾಪಕ ಭ್ರಷ್ಟಾಚಾರದಲ್ಲಿ ಮುಳುಗಿದೆ. ಇದರ ವಿರುದ್ಧ ಗುತ್ತಿಗೆದಾರರು ಆಕ್ರೋಶ ವ್ಯಕ್ತಪಡಿಸಿ ಸಿಎಂಗೆ ಪತ್ರ ಬರೆದರೂ ಕಿಮ್ಮತ್ತಿಲ್ಲದಂತಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ದುರಾಡಳಿತ ನಡೆಸುತ್ತಿದೆ. ಒಂದೆಡೆ ಬೆಲೆ ಏರಿಕೆಯ ಬರೆ ಎಳೆದು ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದು, ಮತ್ತೊಂದೆಡೆ ಗ್ಯಾರೆಂಟಿಗಳ ನೆಪದಲ್ಲಿ ರಾಜ್ಯದ ಅಭಿವೃದ್ಧಿಯನ್ನು ಸಂಪೂರ್ಣ ಕಡೆಗಣಿಸಿದೆ. ಅಲ್ಲದೇ ವರ್ಗಾವಣೆಯನ್ನು ಒಂದು ದಂಧೆಯನ್ನಾಗಿ ಮಾಡಿಕೊಂಡಿದೆ ಎಂದು ದೂರಿದ್ದಾರೆ.